ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ; ಮೋದಿ, ಶಾ ಅವರ ಸಾಮೂಹಿಕ ವೈಫಲ್ಯದ ಸಂಕೇತ: ಗೌರವ್ ಗೊಗೊಯಿ

ಗೌರವ್ ಗೊಗೋಯಿ | PTI
ಹೊಸದಿಲ್ಲಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಈಶಾನ್ಯ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ನಾಯಕತ್ವದ ಸಾಮೂಹಿಕ ವೈಫಲ್ಯದ ಸಂಕೇತ ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೋಯಿ ಶನಿವಾರ ವ್ಯಾಖ್ಯಾನಿಸಿದ್ದಾರೆ.
ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಗುರುವಾರ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ ಹಾಗೂ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಾಜ್ಯ ವಿಧಾನ ಸಭೆಯನ್ನು ಅಮಾನತಿನಲ್ಲಿರಿಸಲಾಗಿದೆ.
ಮಣಿಪುರದಲ್ಲಿ ಸುಸ್ಥಿರ ಶಾಂತಿ ಹಾಗೂ ಸಾಮರಸ್ಯಕ್ಕೆ ಇದುವರೆಗೆ ಯಾವುದೇ ಮಾರ್ಗ ನಕ್ಷೆ ರೂಪಿಸಿಲ್ಲ ಎಂದು ಗೌರವ್ ಗೊಗೋಯ್ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸಂಪೂರ್ಣವಾಗಿ ಅವ್ಯವಸ್ಥಿತವಾಗಿರುವುದರಿಂದಲೇ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ ಎಂದು ಹೇಳಬಹುದು ಎಂದು ಅವರು ತಿಳಿಸಿದರು.
2023 ಮೇಯಲ್ಲಿ ಆರಂಭವಾದ ಜನಾಂಗೀಯ ಹಿಂಸಾಚಾರದಲ್ಲಿ ಇಂಫಾಲ ಕಣಿವೆಯಲ್ಲಿ ಬಹುಸಂಖ್ಯಾತ ಮೈತೈ ಸಮುದಾಯ ಹಾಗೂ ಸುತ್ತಮುತ್ತಲಿನ ಬೆಟ್ಟದಲ್ಲಿರುವ ಕುಕಿ ರೆ ಬುಡಕಟ್ಟು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಈ ಘರ್ಷಣೆಯಲ್ಲಿ 250ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಹಾಗೂ ಸಾವಿರಾರು ಜನರು ಸ್ಥಳಾಂತರಗೊಂಡಿದ್ದರು.