ವೈಫಲ್ಯದ ಹೊಣೆಗಾರಿಕೆಯಿಂದ ನುಣುಚಿಕೊಂಡ ಮೋದಿ: ಸೋನಿಯಾ ಗಾಂಧಿ ಟೀಕೆ
ನರೇಂದ್ರ ಮೋದಿ , ಸೋನಿಯಾ ಗಾಂಧಿ | PC ; PTI
ಹೊಸದಿಲ್ಲಿ: ಇಂದು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸುತ್ತಿರುವ ನರೇಂದ್ರ ಮೋದಿಯವರನ್ನು ಗೇಲಿ ಮಾಡಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಮೋದಿಯವರು ತಾನು ಬಯಸಿದ್ದ ಜನಾದೇಶವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ತನ್ನ ಪಕ್ಷ ಮತ್ತು ಮಿತ್ರಪಕ್ಷಗಳನ್ನು ಹೊರಗಿಟ್ಟು ತನ್ನದೇ ಹೆಸರಿನಲ್ಲಿ ಜನಾದೇಶವನ್ನು ಬಯಸಿದ್ದ ಮೋದಿಯವರು ರಾಜಕೀಯ ಮತ್ತು ಕೆಟ್ಟ ನೈತಿಕ ಸೋಲನ್ನು ಅನುಭವಿಸಿದ್ದಾರೆ. ವಾಸ್ತವದಲ್ಲಿ ಅವರು ತಾನು ಬಯಸಿದ್ದ ಜನಾದೇಶವನ್ನು ಪಡೆಯುವಲ್ಲಿ ವಿಫಲಗೊಂಡಿದ್ದಾರೆ ಮತ್ತು ತನ್ಮೂಲಕ ನಾಯಕತ್ವದ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಶನಿವಾರ ಇಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ಸೋನಿಯಾ ಟೀಕಿಸಿದರು.
‘ಆದರೂ ವೈಫಲ್ಯಕ್ಕಾಗಿ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವ ಬದಲು ಅವರು ಮತ್ತೊಮ್ಮೆ ಪ್ರಧಾನಿ ಪಟ್ಟಕ್ಕೇರಲು ಸಜ್ಜಾಗಿದ್ದಾರೆ. ಅವರು ತನ್ನ ಆಡಳಿತದ ತಿರುಳು ಮತ್ತು ಶೈಲಿಯನ್ನು ಬದಲಿಸುತ್ತಾರೆ ಅಥವಾ ಜನರ ಇಚ್ಛೆಯನ್ನು ಗಮನಕ್ಕೆ ತೆಗೆದುಕೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸುತ್ತಿಲ್ಲ’ಎಂದರು.
‘ಮೋದಿ ಮತ್ತು ಅವರ ಸರಕಾರವನ್ನು ಉತ್ತರದಾಯಿಯನ್ನಾಗಿ ಮಾಡುವಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷವು ನಿಗಾ ಇರಿಸಬೇಕು ಮತ್ತು ಜಾಗರೂಕವಾಗಿರಬೇಕು. ಅದು ನಮ್ಮ ವಿಶೇಷ ಬಾಧ್ಯತೆಯಾಗಿದೆ’ ಎಂದು ಹೇಳಿದ ಅವರು, ಕಳೆದೊಂದು ದಶಕದಿಂದ ಮಾಡಿದಂತೆ ಇನ್ನು ಮುಂದೆ ಸಂಸತ್ತನ್ನು ಬುಲ್ಡೋಜ್ ಮಾಡುವಂತಿಲ್ಲ ಮತ್ತು ಮಾಡಲೂಬಾರದು. ಸಂಸತ್ತಿನ ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡಲು, ಸದಸ್ಯರನ್ನು ಅನುಚಿತವಾಗಿ ನಡೆಸಿಕೊಳ್ಳಲು, ಸೂಕ್ತ ಪರಿಗಣನೆ ಅಥವಾ ಚರ್ಚೆಯಿಲ್ಲದೆ ಶಾಸನಗಳನ್ನು ತರಲು ಇನ್ನು ಮುಂದೆ ಸರಕಾರಕ್ಕೆ ಅವಕಾಶವಿರುವುದಿಲ್ಲ. 2014ರಿಂದಲೂ ಅವರು ಮಾಡಿದಂತೆ ಸಂಸದೀಯ ಸಮಿತಿಗಳ ಕಡೆಗಣನೆ ಅಥವಾ ಬೈಪಾಸ್ ಇನ್ನು ಮುಂದೆ ಸಾಧ್ಯವಿಲ್ಲ. ಸಂಸತ್ತಿನ ಧ್ವನಿಯನ್ನಡಗಿಸುವುದು ಅಥವಾ ಅದನ್ನು ಉಸಿರುಗಟ್ಟಿಸುವುದು ಇನ್ನು ಮುಂದೆ ಸಾಧ್ಯವಿಲ್ಲ ಎಂದರು.