ಪ್ರಧಾನಿ ಮೋದಿ ಹುದ್ದೆಯಿಂದ ಕೆಳಗಿಳಿಯಬೇಕು: ಸುಬ್ರಮಣಿಯನ್ ಸ್ವಾಮಿ
"ಆತ್ಮಗೌರವ ಇರುವ ಯಾವುದೇ ನಾಯಕ ತಾನಾಗಿಯೇ ಹುದ್ದೆ ತೊರೆಯಬೇಕು, ಹೊರದಬ್ಬಿಸಿಕೊಳ್ಳಬಾರದು"
ಸುಬ್ರಮಣಿಯನ್ ಸ್ವಾಮಿ (PTI)
ಹೊಸದಿಲ್ಲಿ: “ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಈ ಬಾರಿ ಬಹುಮತ ಗಳಿಸದೇ ಇರುವುದರಿಂದ ಪ್ರಧಾನಿ ಮೋದಿ ತಾವಾಗಿಯೇ ಹುದ್ದೆಯಿಂದ ಕೆಳಗಿಳಿಯಬೇಕು. ಯಾವುದೇ ಆತ್ಮಗೌರವ ಇರುವ ನಾಯಕ ತಾನೇ ಮುಂದಾಗಿ ಹುದ್ದೆ ತೊರೆಯಬೇಕೇ ಹೊರತು, ಹೊರ ದಬ್ಬಿಸಿಕೊಳ್ಳಬಾರದು,” ಎಂದು ಬಿಜೆಪಿ ನಾಯಕ ಹಾಗೂ ಪ್ರಧಾನಿ ಮೋದಿಯ ಕಟು ಟೀಕಾಕಾರ ಸುಬ್ರಮಣಿಯನ್ ಸ್ವಾಮಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ವ್ಯಂಗ್ಯವಾಡಿದ್ದಾರೆ.
2019ರ ಚುನಾವಣೆಯಲ್ಲಿ ಸ್ವಂತ ಬಲದಲ್ಲಿ 303 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿಯ ಚುನಾವಣೆಯಲ್ಲಿ ಕೇವಲ 240 ಸ್ಥಾನಗಳನ್ನು ಗಳಿಸಲಷ್ಟೆ ಶಕ್ತವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 63 ಸ್ಥಾನಗಳ ನಷ್ಟ ಅನುಭವಿಸಿದೆ. ಹೀಗಾಗಿ ಕೇಂದ್ರದಲ್ಲಿ ಸರಕಾರ ರಚಿಸಲು ಮೈತ್ರಿಪಕ್ಷಗಳನ್ನು ಆಧರಿಸಬೇಕಾದ ಪರಿಸ್ಥಿತಿ ಬಿಜೆಪಿಗೆ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸ್ವಾಮಿಯವರ ಟೀಕೆ ಮಾಡಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಕಟ್ಟಾ ಸಂಘ ಪರಿವಾರದ ಸದಸ್ಯರಾಗಿರುವುದರಿಂದ, ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ವಿವಿಧ ಬಗೆಯಲ್ಲಿ ವ್ಯಾಖ್ಯಾನಗೊಳ್ಳತೊಡಗಿದೆ.