ವಿವಾದದ ಕಿಡಿ ಹೊತ್ತಿಸಿದ ಸುಪ್ರೀಂ ಕೋರ್ಟ್ ಸಿಜೆಐ ಮನೆಗೆ ಮೋದಿ ಭೇಟಿ
Photo : x/@narendramodi
ಹೊಸದಿಲ್ಲಿ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮನೆಯಲ್ಲಿ ನಡೆದ ಗಣೇಶ ಚತುರ್ಥಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದು, ರಾಜಕೀಯ ವಲಯದಲ್ಲಿ ವಿವಾದದ ಕಿಡಿ ಹೊತ್ತಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ನಡೆಯನ್ನು ಟೀಕಿಸಿರುವ ಪ್ರತಿಪಕ್ಷಗಳು, ಇದು ‘ಕೆಟ್ಟ ಸಂದೇಶ’ ರವಾನಿಸುತ್ತದೆ ಎಂದು ಕಿಡಿಕಾರಿವೆ. ಆದರೆ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುವುದು ಅಪರಾಧವಲ್ಲ ಎನ್ನುವ ಮೂಲಕ ಬಿಜೆಪಿ ಸೇರಿದಂತೆ ಎನ್ ಡಿ ಎ ಮೈತ್ರಿಕೂಟದ ಮಿತ್ರಪಕ್ಷಗಳು, ವಿರೋಧಿಗಳ ಟೀಕೆಗೆ ತಿರುಗೇಟು ನೀಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮನೆಯಲ್ಲಿ ಬುಧವಾರ ನಡೆದ ಪೂಜೆಯಲ್ಲಿ ಪ್ರಧಾನಿ ಭಾಗವಹಿಸಿದ ಫೋಟೊ ಮತ್ತು ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ‘ಸಿಜೆಐ ನಿವಾಸದಲ್ಲಿ ನಡೆದ ಗಣೇಶ ಪೂಜೆಯಲ್ಲಿ ಪಾಲ್ಗೊಂಡೆ. ಗಣೇಶ ದೇವರು ನಮ್ಮೆಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಆರೋಗ್ಯವನ್ನು ನೀಡಲಿ’ ಎಂದು ಪೂಜೆಯ ಚಿತ್ರವನ್ನು ಪ್ರಧಾನಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ವಿರೋಧ ಪಕ್ಷಗಳ ಹಲವು ನಾಯಕರು ಪ್ರಧಾನಿ ಪೋಸ್ಟ್ ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
‘ಸಿಜೆಐ ಅವರು ಕಾರ್ಯಾಂಗ ಮತ್ತು ನ್ಯಾಯಾಂಗದ ಅಧಿಕಾರದ ನಡುವಿನ ವಿಭಜನೆಯನ್ನು ರಾಜಿ ಮಾಡಿಕೊಂಡಿದ್ದಾರೆ. ಮುಖ್ಯ ನ್ಯಾಯಮೂರ್ತಿಯವರ ಸ್ವಾತಂತ್ರ್ಯದ ಬಗ್ಗೆ ಇದ್ದ ಎಲ್ಲ ವಿಶ್ವಾಸವನ್ನೂ ಕಳೆದುಕೊಂಡೆ. ಇದನ್ನು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್ಸಿಬಿಎ) ಖಂಡಿಸಬೇಕು’ ಎಂದು ‘ಎಕ್ಸ್’ನಲ್ಲಿ ಇಂದಿರಾ ಜೈಸಿಂಗ್ ದೂರಿದ್ದಾರೆ.
ನ್ಯಾಯಾಧೀಶರ ನೀತಿ ಸಂಹಿತೆ: "ನ್ಯಾಯಾಧೀಶರು ತಮ್ಮ ಕಚೇರಿಯ ಘನತೆಯನ್ನು ಕಾಪಾಡಬೇಕು. ಅವರು ಹೊಂದಿರುವ ಉನ್ನತ ಹುದ್ದೆಗೆ ಮತ್ತು ಆ ಹುದ್ದೆಯಲ್ಲಿರುವ ಗೌರವಕ್ಕೆ ತಕ್ಕುದಲ್ಲದ ಯಾವುದೇ ಕಾರ್ಯ ಅಥವಾ ಲೋಪವು ಅವರಿಂದ ಆಗಬಾರದು. ಇದು ನೀತಿ ಸಂಹಿತೆಯ ಉಲ್ಲಂಘನೆ” ಎಂದು ಎಂದು ವಕೀಲ ಪ್ರಶಾಂತ್ ಭೂಷಣ್ ಪೋಸ್ಟ್ ಮಾಡಿದ್ದಾರೆ.