ಮನುಷ್ಯ ದೇವರಾಗಲು ಬಯಸುತ್ತಿದ್ದಾನೆ ಎಂದ ಮೋಹನ್ ಭಾಗವತ್; ಪ್ರಧಾನಿ ಮೋದಿಯನ್ನು ಕುಟುಕಿದ ಕಾಂಗ್ರೆಸ್
ಮೋಹನ್ ಭಾಗವತ್ | PTI
ಹೊಸದಿಲ್ಲಿ: ಮನುಷ್ಯ ದೇವನಾಗಲು ಬಯಸುತ್ತಿದ್ದಾನೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆಯನ್ನು ಪ್ರಸ್ತಾಪಿಸಿ, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಧಾನಿ ನರೇಂದ್ರ ಮೋದಿಯನ್ನು ಗೇಲಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, "ಲೋಕ ಕಲ್ಯಾಣ ಮಾರ್ಗವನ್ನು ಗುರಿಯಾಗಿಸಿಕೊಂಡು ಝಾರ್ಖಂಡ್ನಿಂದ ನಾಗಪುರವು ಉಡಾಯಿಸಿರುವ ಅಗ್ನಿ ಕ್ಷಿಪಣಿಯ ಬಗ್ಗೆ ಸ್ವಘೋಷಿತ ಅಜೈವಿಕ ಪ್ರಧಾನಿಗೆ ತಿಳಿದಿರುತ್ತದೆ ಎಂದು ನಾನು ಖಂಡಿತ ಭಾವಿಸಿದ್ದೇನೆ" ಎಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಮುನ್ನ, ಗುರುವಾರ ಜಾರ್ಖಂಡ್ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯ ಅಶೋಕ್ ಭಗತ್ ನಡೆಸುತ್ತಿರುವ ಲಾಭರಹಿತ ಸರಕಾರೇತರ ಸಂಸ್ಥೆ ವಿಕಾಸ್ ಭಾರತಿ ವತಿಯಿಂದ ಆಯೋಜಿಸಲಾಗಿದ್ದ ಗ್ರಾಮ ಮಟ್ಟದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, "ಮನುಷ್ಯರು ಮೊದಲಿಗೆ ಮನುಷ್ಯಾತೀತರಾಗಲು ಬಯಸುತ್ತಾರೆ. ನಂತರ ದೇವರಾಗಲು, ತದನಂತರ ವಿಶ್ವರೂಪಿಗಳಾಗಲು ಮುಂದಾಗುತ್ತಾರೆ. ಆದರೆ, ಅಭಿವೃದ್ಧಿಯ ವ್ಯಾಖ್ಯಾನಕ್ಕೆ ಕೊನೆ ಎಂಬುದು ಇಲ್ಲದೆ ಇರುವುದರಿಂದ ಮನುಷ್ಯರು ಮನುಷ್ಯತ್ವದ ಕಲ್ಯಾಣಕ್ಕಾಗಿ ದುಡಿಯಬೇಕು" ಎಂದು ಕರೆ ನೀಡಿದ್ದರು.
ಲೋಕಸಭಾ ಚುನಾವಣೆಗೂ ಮುನ್ನ ಹಲವು ಮಾಧ್ಯಮ ಸಂಸ್ಥೆಗಳಿಗೆ ಸಂದರ್ಶನ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, "ನಾನು ಅಜೈವಿಕ ಸೃಷ್ಟಿಯಾಗಿದ್ದು, ನನ್ನನ್ನು ದೇವರೇ ಭೂಮಿಗೆ ಕಳಿಸಿದ್ದಾನೆ ಎಂಬುದು ನನಗೆ ಮನವರಿಕೆಯಾಗಿದೆ" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಟೀಕೆ ಹಾಗೂ ವ್ಯಂಗ್ಯಕ್ಕೆ ಗುರಿಯಾಗಿತ್ತು. ಇದೀಗ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆಯು ಪ್ರಧಾನಿ ನರೇಂದ್ರ ಮೋದಿ ಕುರಿತ ವ್ಯಂಗ್ಯ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಕ್ಕೊಳಗಾಗುತ್ತಿದೆ.