ಹಣ ಅಕ್ರಮ ವರ್ಗಾವಣೆ ಪ್ರಕರಣ: ಶ್ರೀನಗರದ 8 ಸ್ಥಳಗಳಲ್ಲಿ ಈಡಿ ದಾಳಿ; ಇಬ್ಬರ ಬಂಧನ
Photo: PTI
ಶ್ರೀನಗರ: ಜಮ್ಮು ಹಾಗೂ ಕಾಶ್ಮೀರ ರಾಜ್ಯ ಕೋ-ಆಪರೇಟಿವ್ ಬ್ಯಾಂಕ್ (JKSTCB) 2019ರಲ್ಲಿ 250 ಕೋ.ರೂ. ಸಾಲವನ್ನು ಮೋಸದಿಂದ ಮಂಜೂರು ಮಾಡಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ನಿಯಮಗಳ ಅಡಿಯಲ್ಲಿ ಜಾರಿ ನಿರ್ದೇಶನಾಲಯ ಶುಕ್ರವಾರ ಇಬ್ಬರನ್ನು ಬಂಧಿಸಿದೆ.
ಜಾರಿ ನಿರ್ದೇಶನಾಲಯದ ತಂಡ ಶ್ರೀನಗರದ 8 ಸ್ಥಳಗಳಲ್ಲಿ ದಾಳಿ ನಡೆಸಿತು ಹಾಗೂ ಜೆಕೆಎಸ್ಟಿಸಿಬಿಯ ಆಗಿನ ಅಧ್ಯಕ್ಷ ಮುಹಮ್ಮದ್ ಶಫಿ ದಾರ್, ರಿವರ್ ಝೀಲಂ ಕೋ-ಆಪರೇಟಿವ್ ಹೌಸ್ ಬಿಲ್ಡಿಂಗ್ ಸೊಸೈಟಿಯ ಅಧ್ಯಕ್ಷ ಹಿಲಾಲ್ ಅಹ್ಮದ್ ಮಿರ್ ನನ್ನು ಬಂಧಿಸಿತು ಎಂದು ಜಾರಿ ನಿರ್ದೇಶನಾಲಯದ ವಕ್ತಾರ ತಿಳಿಸಿದ್ದಾನೆ.
ನಕಲಿ ಕೋ-ಆಪರೇಟಿವ್ ಸೊಸೈಟಿ ರಿವರ್ ಝೀಲಂ ಕೋ-ಆಪರೇಟಿವ್ ಹೌಸ್ ಬಿಲ್ಡಿಂಗ್ ಸೊಸೈಟಿಗೆ 2019ರಲ್ಲಿ 250 ಕೋಟಿ ರೂ. ಸಾಲವನ್ನು ಜೆಕೆಎಸ್ಟಿಸಿಬಿ ಮೋಸದಿಂದ ಮಂಜೂರು ಮಾಡಿದ ಪ್ರಕರಣದಲ್ಲಿ ಪಿಎಂಎಲ್ಎ ನಿಯಮಗಳ ಅಡಿಯಲ್ಲಿ ಇವರಿಬ್ಬರನ್ನು ಬಂಧಿಸಲಾಗಿದೆ ಎಂದು ವಕ್ತಾರ ತಿಳಿಸಿದ್ದಾರೆ.
ದಾಳಿ ಸಂದರ್ಭ ಡಿಜಿಟಲ್ ಸಾಧನಗಳು ಸೇರಿದಂತೆ ಹಲವು ದೋಷಾರೋಪದ ದಾಖಲೆಗಳು, ಸೊತ್ತಿನ ದಾಖಲೆಗಳು ಪತ್ತೆಯಾಗಿವೆ. ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಿಬ್ಬರನ್ನು ಶುಕ್ರವಾರ ಶ್ರೀನಗರದ ಪಿಎಂಎಲ್ಎ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.