ಹಣ ಅಕ್ರಮ ವರ್ಗಾವಣೆ ಪ್ರಕರಣ ; ಜಾರ್ಖಂಡ್ ಸಿಎಂಗೆ ಈಡಿ ಸಮನ್ಸ್
ಹೇಮಂತ್ ಸೊರೇನ್ | Photo: PTI
ಹೊಸದಿಲ್ಲಿ: ಭೂಹಗರಣದ ಆರೋಪಕ್ಕೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ತನ್ನ ಮುಂದೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಈಡಿ) ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಹೊಸ ಸಮನ್ಸ್ ಜಾರಿ ಮಾಡಿದೆ.
‘‘ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಹೇಳಿಕೆ ದಾಖಲಿಸಲು ರಾಂಚಿಯಲ್ಲಿರುವ ತನ್ನ ಕಚೇರಿಯಲ್ಲಿ ಡಿಸೆಂಬರ್ 12ರಂದು ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಹೇಮಂತ್ ಸೊರೇನ್ ಅವರಿಗೆ ಸೋಮವಾರ ಸೂಚಿಸಿದೆ’’ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹೇಮಂತ್ ಸೊರೇನ್ ಅವರಿಗೆ ನೀಡುತ್ತಿರುವ 6ನೇ ಸಮನ್ಸ್ ಇದಾಗಿದೆ. ಆದರೆ, ಹೇಮಂತ್ ಸೊರೇನ್ ಈಡಿ ಕ್ರಮದಿಂದ ರಕ್ಷಣೆ ನೀಡುವಂತೆ ಸುಪ್ರೀಂ ಕೋರ್ಟ್ಗೆ ಹಾಗೂ ಅನಂತರ ಜಾರ್ಖಂಡ್ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದರಿಂದ ಹಾಗೂ ಸಮನ್ಸ್ ಅನ್ನು ಅನಪೇಕ್ಷಿತ ಎಂದು ವ್ಯಾಖ್ಯಾನಿಸಿರುವುದರಿಂದ ಹೇಳಿಕೆ ನೀಡಿರಲಿಲ್ಲ. ಅರ್ಜಿಯನ್ನು ಎರಡೂ ನ್ಯಾಯಾಲಯಗಳು ತಳ್ಳಿ ಹಾಕಿದ್ದವು.
ತನ್ನ ವಿರುದ್ಧ ದುರುದ್ದೇಶದಿಂದ ಸಮನ್ಸ್ ಜಾರಿ ಮಾಡಲಾಗಿದೆ. ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಹಾಗೂ ಅಶಾಂತಿಯನ್ನು ಸೃಷ್ಟಿಸುವ ಏಕೈಕ ಉದ್ದೇಶದಿಂದ ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ ಎಂದು ಹೇಮಂತ್ ಸೊರೇನ್ ಅವರು ಉಚ್ಚ ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದರು.
ಜಾರಿ ನಿರ್ದೇಶನಾಲಯ ಹೇಮಂತ್ ಸೊರೇನ್ ಅವರ ವಿರುದ್ಧ ಮೊದಲ ಸಮನ್ಸ್ ಅನ್ನು ಆಗಸ್ಟ್ 14ರಂದು ಜಾರಿಗೊಳಿಸಿತ್ತು. ‘‘ಜಾರ್ಖಂಡ್ ನಲ್ಲಿ ಮಾಫಿಯಾದಿಂದ ಭೂ ಮಾಲಕತ್ವದ ಅಕ್ರಮ ಬದಲಾವಣೆಯ ಬೃಹತ್ ದಂಧೆ ನಡೆಯುತ್ತಿದೆ’’ ಎಂಬ ಜಾರಿ ನಿರ್ದೇಶನಾಲಯದ ಆರೋಪಕ್ಕೆ ಸಂಬಂಧಿಸಿದ ತನಿಖೆ ಇದಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ 2011ರ ಬ್ಯಾಚಿನ ಐಎಎಸ್ ಅಧಿಕಾರಿ ಛಾವಿ ರಂಜನ್ ಸೇರಿದಂತೆ 14 ಮಂದಿಯನ್ನು ಬಂಧಿಸಿದೆ.
ರಾಜ್ಯದಲ್ಲಿ ಕಾನೂನು ಬಾಹಿರ ಗಣಿಗಾರಿಕೆ ಆರೋಪದ ಇನ್ನೊಂದು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಕಳೆದ ವರ್ಷ ನವೆಂಬರ್ ನಲ್ಲಿ ಸೊರೇನ್ ಅವರನ್ನು ವಿಚಾರಣೆ ಒಳಪಡಿಸಿತ್ತು.