ಭಾರತದಲ್ಲಿ ಮೊದಲ ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ದೇಶದಲ್ಲಿ ಮೊದಲ ಶಂಕಿತ ಮಂಕಿಪಾಕ್ಸ್ (ಎಂಪಾಕ್ಸ್) ಪ್ರಕರಣ ವರದಿಯಾಗಿದೆ. ಮಂಕಿಪಾಕ್ಸ್ ಹರಡಿರುವ ದೇಶದಿಂದ ಭಾರತಕ್ಕೆ ಮರಳಿರುವ ವ್ಯಕ್ತಿಯಲ್ಲಿ ಶಂಕಿತ ರೋಗಲಕ್ಷಣಗಳು ಕಾಣಿಸಿಕೊಂಡಿದ್ದು, ಆತನನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ನಲ್ಲಿ ಇರಿಸಲಾಗಿದೆ ಮತ್ತು ಪ್ರಸ್ತುತ ಆತನ ದೇಹಸ್ಥಿತಿ ಸ್ಥಿರವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ರವಿವಾರ ತಿಳಿಸಿದೆ.
ವೈರಸ್ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ರೋಗಿಯ ಸ್ಯಾಂಪಲ್ಗಳನ್ನು ಪರೀಕ್ಷಿಸಲಾಗುತ್ತಿದೆ. ಸ್ಥಾಪಿತ ಶಿಷ್ಟಾಚಾರಗಳಿಗೆ ಅನುಗುಣವಾಗಿ ಪ್ರಕರಣವನ್ನು ನಿರ್ವಹಿಸಲಾಗುತ್ತಿದೆ ಮತ್ತು ಸಂಭಾವ್ಯ ಮೂಲಗಳನ್ನು ಗುರುತಿಸಲು ಹಾಗೂ ದೇಶದಲ್ಲಿ ವೈರಸ್ ಪರಿಣಾಮವನ್ನು ನಿರ್ಧರಿಸಲು ರೋಗಿಯ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಸಚಿವಾಲಯವು ತಿಳಿಸಿದೆ.
ಪ್ರಕರಣದ ಬೆಳವಣಿಗೆಯು ಎನ್ಸಿಡಿಸಿ ಹಿಂದೆ ನಡೆಸಿದ್ದ ಅಪಾಯ ಮೌಲ್ಯಮಾಪನಕ್ಕೆ ಅನುಗುಣವಾಗಿದೆ ಮತ್ತು ಅನಗತ್ಯ ಕಳವಳಗಳಿಗೆ ಯಾವುದೇ ಕಾರಣವಿಲ್ಲ ಎಂದು ತಿಳಿಸಿರುವ ಸಚಿವಾಲಯವು, ದೇಶವು ಇಂತಹ ಪ್ರತ್ಯೇಕ ಪ್ರಯಾಣ-ಸಂಬಂಧಿತ ಪ್ರಕರಣವನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ ಮತ್ತು ಯಾವುದೇ ಸಂಭಾವ್ಯ ಅಪಾಯವನ್ನು ಎದುರಿಸಲು ಮತ್ತು ಶಮನಿಸಲು ದೃಢವಾದ ಕ್ರಮಗಳು ಅಸ್ತಿತ್ವದಲ್ಲಿವೆ ಎಂದು ಹೇಳಿದೆ.
ಕಳೆದ ತಿಂಗಳು ಆಫ್ರಿಕಾದಿಂದ ಥೈಲಂಡ್ಗೆ ಮರಳಿದ್ದ ವ್ಯಕ್ತಿಯಲ್ಲಿ ಏಶ್ಯಾದ ಮೊದಲ ಮಂಕಿಪಾಕ್ಸ್ ಪ್ರಕರಣ ವರದಿಯಾಗಿತ್ತು. 66ರ ಹರೆಯದ ವ್ಯಕ್ತಿಯ ಸ್ಯಾಂಪಲ್ಗಳ ಪ್ರಯೋಗಾಲಯ ಪರೀಕ್ಷೆಗಳು ಆತ ಎಂಪಾಕ್ಸ್ ಕ್ಲೇಡ್ 1ಬಿ ಪ್ರಭೇದದ ಸೋಂಕಿಗೊಳಗಾಗಿದ್ದನ್ನು ದೃಢಪಡಿಸಿವೆ ಎಂದು ಥೈಲಂಡ್ನ ರೋಗ ನಿಯಂತ್ರಣ ಇಲಾಖೆಯು ತಿಳಿಸಿತ್ತು.
ಪಾಕಿಸ್ತಾನದಲ್ಲಿಯೂ ಕನಿಷ್ಠ ಒಂದು ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ. ಕೊಲ್ಲಿ ರಾಷ್ಟ್ರದಿಂದ ಮರಳಿದ್ದ ವ್ಯಕ್ತಿಯಲ್ಲಿ ಎಂಪಾಕ್ಸ್ ಲಕ್ಷಣಗಳು ಪತ್ತೆಯಾಗಿವೆ.
ಮಂಕಿಪಾಕ್ಸ್ ಸ್ಥಳೀಯವಲ್ಲದ 80ಕ್ಕೂ ಅಧಿಕ ದೇಶಗಳಲ್ಲಿ ಈ ವೈರಸ್ ರೋಗವು ಏಕಾಏಕಿ ಭುಗಿಲೆದ್ದಿದೆ ಮತ್ತು ದೃಢಪಟ್ಟ ಪ್ರಕರಣಗಳ ಸಂಖ್ಯೆ 40,000 ದಾಟಿದೆ ಹಾಗೂ ಈ ದೇಶಗಳಲ್ಲಿ ಮೊದಲ ಎಂಪಾಕ್ಸ್ ಸಂಬಂಧಿತ ಸಾವುಗಳು ದಾಖಲಾಗಿವೆ ಎಂದು ಸುದ್ದಿಸಂಸ್ಥೆ ರಾಯ್ಟರ್ಸ್ ಆ.19ರಂದು ವರದಿ ಮಾಡಿತ್ತು.
ಎಂಪಾಕ್ಸ್ ಲಸಿಕೆಗಳ ಖರೀದಿಗಾಗಿ ತಾನು ತುರ್ತು ಟೆಂಡರ್ ಕರೆದಿರುವುದಾಗಿ ಆ.31ರಂದು ಪ್ರಕಟಿಸಿದ್ದ ಯುನಿಸೆಫ್, ಈ ಆರೋಗ್ಯ ಬಿಕ್ಕಟ್ಟಿನ ಕೇಂದ್ರಬಿಂದುವಾಗಿರುವ ಕಾಂಗೋದಲ್ಲಿ ಈ ವರ್ಷ 629 ಸಾವುಗಳು ಸೇರಿದಂತೆ 18,000ಕ್ಕೂ ಅಧಿಕ ಶಂಕಿತ ಎಂಪಾಕ್ಸ್ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿತ್ತು.
ವೈರಸ್ನ ನೂತನ ಪ್ರಭೇದವು ದಿನನಿತ್ಯದ ನಿಕಟ ಸಂಪರ್ಕದ ಮೂಲಕ ಹೆಚ್ಚು ಸುಲಭವಾಗಿ ಹರಡುವಂತೆ ಕಂಡು ಬಂದಿರುವುದು ಜಾಗತಿಕ ಕಳವಳವನ್ನುಂಟು ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಎಂಪಾಕ್ಸ್ ಸೋಂಕಿತ ವ್ಯಕ್ತಿ ಅಥವಾ ಕಲುಷಿತ ವಸ್ತುಗಳು ಅಥವಾ ಸೋಂಕಿತ ಪ್ರಾಣಿಗಳ ಮೂಲಕ ವೈರಸ್ ಹರಡಬಲ್ಲದು. ಗರ್ಭಾವಸ್ಥೆಯಲ್ಲಿ ವೈರಸ್ ಭ್ರೂಣಕ್ಕೆ ವರ್ಗಾವಣೆಯಾಗಬಹುದು ಅಥವಾ ಜನನದ ಸಂದರ್ಭದಲ್ಲಿ ಅಥವಾ ಜನನದ ನಂತರ ನವಜಾತ ಶಿಶುವು ವೈರಸ್ ಸೋಂಕಿಗೆ ತುತ್ತಾಗಬಹುದು.