ಕೇರಳದಲ್ಲಿ ಆರ್ಭಟಿಸಿದ ಮುಂಗಾರು, ಇಡುಕ್ಕಿಯಲ್ಲಿ ರೆಡ್ ಆಲರ್ಟ್
Photo : PTI
ತಿರುವನಂತಪುರ: ಕೇರಳದಲ್ಲಿ ಬುಧವಾರ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ ಹಾಗೂ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಎಡೆಬಿಡದೆ ಧಾರಾಕಾರ ಮಳೆಯಾಗುತ್ತಿದ್ದು, ರಾಜ್ಯದ 14 ಜಿಲ್ಲೆಗಳ ಪೈಕಿ ಕಾಸರಗೋಡು ಸೇರಿದಂತೆ 11 ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್ ಘೋಷಿಸಲಾಗಿದೆ.
ಇಡುಕ್ಕಿ ಜಿಲ್ಲೆಯಲ್ಲಿ ರೆಡ್ ಆಲರ್ಟ್ ಹಾಗೂ ಕೊಲ್ಲಂ, ತಿರುವನಂತಪುರಂ ಮತ್ತು ಲಕ್ಷದ್ವೀಪದಲ್ಲಿ ಯೆಲ್ಲೋ ಆಲರ್ಟ್ ಘೋಷಣೆಯಾಗಿದೆ. ಆದರೆ ಮುಂದಿನ ಕೆಲವು ದಿನಗಳಲ್ಲಿ ಮಳೆಯ ತೀವ್ರತೆ ಇಳಿಮುಖವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕಣ್ಣೂರು ಜಿಲ್ಲೆಯ ಕೇಂದ್ರೀಯ ಕಾರಾಗೃಹದಲ್ಲಿ ಇಂದು ಮುಂಜಾನೆ 30 ಮೀಟರ್ ವಿಸ್ತೀರ್ಣದ ಭದ್ರತಾಗೋಡೆಯ ಭಾಗವೊಂದು ಕುಸಿದುಬಿದ್ದಿದೆ. ತಾಮರಶ್ಶೇರಿ ತಾಲೂಕಿನಲ್ಲಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದಾನೆ.
ಪೆರಿಯಾರ್ ಹಾಗೂ ಮುದಿರಾಪುಳ ನದಿಗಳ ದಡಗಳಲ್ಲಿ ವಾಸವಾಗಿರುವವರು ಎಚ್ಚರವಹಿಸುವಂತೆ ಜಿಲ್ಲಾಡಳಿತಗಳು ಸೂಚನೆ ನೀಡಿವೆ. ಒಂದು ವೇಳೆ ಉಕ್ಕಿ ಹರಿಯುತ್ತಿರುವ ನದಿ ನೀರು ಮನೆಗಳಿಗೆ ನುಗ್ಗಿದಲ್ಲಿ ಜನರನ್ನು ಸ್ಥಳಾಂತರಿಸಲು ಸಕಲಸಿದ್ಧತೆ ಮಾಡಿಕೊಳ್ಳಲಾಗಿದೆ. ಮಲಪ್ಪುರಂ ಜಿಲ್ಲೆಯ ಚಾಲಿಯಾರ್ ನದಿಗೆ ಕಟ್ಟಲಾಗಿರುವ ಕಾವನಕ್ಕಲ್ಲು ಅಣೆಕಟ್ಟು -ಸೇತುವೆಯ ಎಲ್ಲಾ ಶಟರ್ಗಳನ್ನು ತೆರೆಯಲಾಗಿದೆ. ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಕಕ್ಕಾಡ್, ಮಣಿಯಾರ್ ನದಿಗಳಿಗೆ ಕಟ್ಟಲಾಗಿರುವ ಕರಿಕ್ಕಾಯಂ ಹಾಗೂ ಉಲ್ಲುಂಗಲ್ ಸೇತುವೆಗಳ ಕಿಂಡಿಗಳನ್ನು ಕೂಡಾ ತೆರೆಯಲಾಗಿದ್ದು, ನೂರಾರು ಕ್ಯೂಸೆಕ್ ನೀರನ್ನು ಬಿಡುಗಡೆಗೊಳಿಸಿದೆ.
ಮಂಗಳವಾರ ರಾತ್ರಿ ರಾಜ್ಯಾದ್ಯಂತ ಭಾರೀ ಗಾಳಿ, ಮಳೆಯಿಂದಾಗಿ ಹಲವೆಡೆ ಮರಗಿಡಗಳು ಧರಾಶಾಯಿಯಾಗಿವೆ. ಹಲವೆಡೆ ಮರಗಳು ಬಿದ್ದು ಮನೆಗಳು ನೆಲಸಮಗೊಂಡಿವೆ. ನದಿಗಳು ಉಕ್ಕಿ ಹರಿಯುತ್ತಿವೆ. ಭಾರೀ ಮಳೆಯಿಂದಾಗಿ ಪತ್ತನಂತಿಟ್ಟ ಜಿಲ್ಲೆಯಲ್ಲಿ ಆಟೋರಿಕ್ಷಾವೊಂದು ಉಕ್ಕಿ ಹರಿಯುತ್ತಿರುವ ನದಿಗೆ ಬಿದ್ದುದರಿಂದ ಚಾಲಕ ಮೃತಪಟ್ಟಿದ್ದಾನೆ.
ಈ ಮಧ್ಯೆ ಮಂಗಳವಾರ ಜಿಲ್ಲಾಧಿಕಾರಿಗಳು ಸೇರಿದಂತೆ ಕಂದಾಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಭೆ ಮಂಗಳವಾರ ರಾತ್ರಿ ನಡೆದಿದ್ದು, ಮಳೆ ಸನ್ನಿವೇಶದ ಪರಾಮರ್ಶೆ ನಡೆಸಿತು. ಭಾರೀ ಮಳೆಯ ಹಿನ್ನೆಲೆಯಲ್ಲಿ ನದಿ, ಪರ್ವತ ಪ್ರದೇಶಗಳಿಗೆ ಹಾಗೂ ಸಮುದ್ರ ಕಿನಾರೆ ಸಮೀಪ ಹೋಗುವುದನ್ನು ತಪ್ಪಿಸುವಂತೆ ಹಾಗೂ ಜಾಗರೂಕರಾಗಿರುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜನತೆಗೆ ಮನವಿ ಮಾಡಿದ್ದಾರೆ.