ಸೋಮವಾರದಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ
ಸರಕಾರದ ವಿರುದ್ಧ ದಾಳಿಗೆ ಪ್ರತಿಪಕ್ಷಗಳು ಸಜ್ಜು | ಮಂಗಳವಾರ ಕೇಂದ್ರಮುಂಗಡಪತ್ರ ಮಂಡನೆ
Photo : ANI
ಹೊಸದಿಲ್ಲಿ : ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭಗೊಳ್ಳಲಿದ್ದು, ಅಂದು ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತ ಪಡಿಸಲಿರುವ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಕೇಂದ್ರ ಮುಂಗಡಪತ್ರವನ್ನು ಮಂಡಿಸಲಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಹಿಡಿದು ರೈಲ್ವೆ ಸುರಕ್ಷತೆವರೆಗೆ ವಿವಿಧ ವಿಷಯಗಳಲ್ಲಿ ಎನ್ಡಿಎ ಸರಕಾರವನ್ನುಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.
ಅಧಿವೇಶನವು ಆ.12ರವರೆಗೆ 19 ಬೈಠಕ್ಗಳನ್ನು ಹೊಂದಿರಲಿದ್ದು,90 ವರ್ಷಗಳಷ್ಟು ಹಳೆಯದಾದ ಏರ್ಕ್ರಾಫ್ಟ್ ಕಾಯ್ದೆಯನ್ನು ಬದಲಿಸುವ ಮಸೂದೆ ಸೇರಿದಂತೆ ಆರು ವಿಧೇಯಕಗಳನ್ನು ಮಂಡಿಸುವ ನಿರೀಕ್ಷೆಯಿದೆ. ಕೇಂದ್ರ ಆಡಳಿತದಡಿ ಇರುವ ಜಮ್ಮು-ಕಾಶ್ಮೀರ ಬಜೆಟ್ಗಾಗಿ ಅನುಮತಿಯನ್ನೂ ಪಡೆದುಕೊಳ್ಳಲಿದೆ.
ಪ್ರತಿಪಕ್ಷಗಳು ಅಧಿವೇಶನದಲ್ಲಿ ಎತ್ತಲಿರುವ ವಿಷಯಗಳನ್ನು ತಿಳಿದುಕೊಳ್ಳಲು ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಅವರು ರವಿವಾರ ಸಂಸತ್ತಿನಲ್ಲಿಯ ಸದನ ನಾಯಕರ ಸಭೆಯನ್ನು ನಡೆಸಿದ್ದರು.
ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ ಪಟ್ನಾಯಕ್ ನೇತೃತ್ವದ ಬಿಜೆಡಿ ತಾನು ಪ್ರಬಲ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸುವುದಾಗಿ ಮತ್ತು ರಾಜ್ಯದ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಆಕ್ರಮಣಕಾರಿಯಾಗಿ ಪ್ರಸ್ತಾವಿಸುವುದಾಗಿ ಘೋಷಿಸಿದೆ. ಬಿಜೆಡಿ ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಪಟ್ನಾಯಕ್, ಒಡಿಶಾಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಯನ್ನು ಕೈಗೆತ್ತಿಕೊಳ್ಳುವಂತೆ ಪಕ್ಷದ ಸಂಸದರಿಗೆ ಸೂಚಿಸಿದ್ದಾರೆ.
ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿಯ ತನ್ನ ಪಾಲು ಬಂಡವಾಳವನ್ನು ಶೇ.51ಕ್ಕಿಂತ ಕಡಿಮೆ ಮಾಡುವ ಸರಕಾರದ ಯಾವುದೇ ಕ್ರಮವನ್ನು ಪ್ರತಿಪಕ್ಷವು ವಿರೋಧಿಸಲಿದೆ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಅವರು ಇತ್ತೀಚಿಗೆ ಹೇಳಿದ್ದರು.
ಸರಕಾರವು ಬಜೆಟ್ ಅಧಿವೇಶನದಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ,1949 ಹಾಗೂ 1970 ಮತ್ತು 1980ರ ಬ್ಯಾಂಕಿಂಗ್ ಕಂಪನಿಗಳ( ಜವಾಬ್ದಾರಿಗಳ ಸ್ವಾಧೀನ ಮತ್ತು ವರ್ಗಾವಣೆ)ಕಾಯ್ದೆಗಳಂತಹ ಇತರ ಕಾನೂನುಗಳಿಗೆ ತಿದ್ದುಪಡಿಗಳನ್ನು ತರುವ ಸಾಧ್ಯತೆಯಿದ್ದು,ಇದರಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಸರಕಾರದ ಪಾಲು ಬಂಡವಾಳವು ಶೇ.51ಕ್ಕಿಂತ ಕಡಿಮೆಯಾಗಬಹುದು.
ಸರಕಾರವು ಹಣಕಾಸು ಮಸೂದೆಯ ಜೊತೆಗೆ ವಿಪತ್ತು ನಿರ್ವಹಣೆ (ತಿದ್ದುಪಡಿ) ಮಸೂದೆಯನ್ನೂ ಮಂಡನೆ,ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿ ಮಾಡಿದೆ. ಪ್ರಸ್ತಾವಿತ ಶಾಸನವು ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಸಂಸ್ಥೆಗಳ ಪಾತ್ರಗಳಲ್ಲಿ ಹೆಚ್ಚಿನ ಸ್ಪಷ್ಟತೆಯನ್ನು ತರುವ ಮತ್ತು ಅವುಗಳನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ ಎಂದು ಗುರುವಾರ ಬಿಡುಗಡೆಗೊಂಡ ಲೋಕಸಭಾ ಬುಲೆಟಿನ್ನಲ್ಲಿ ಹೇಳಲಾಗಿದೆ.
ಭಾರತೀಯ ವಾಯುಯಾನ ವಿಧೇಯಕ,2024 ನಾಗರಿಕ ವಾಯುಯಾನ ಕ್ಷೇತ್ರದಲ್ಲಿ ಸುಗಮ ವ್ಯವಹಾರಕ್ಕೆ ಅನುವು ಮಾಡಿಕೊಡುವ ನಿಬಂಧನೆಗಳನ್ನು ತರಲು ಏರ್ಕ್ರಾಫ್ಟ್ ಕಾಯ್ದೆ,1934ನ್ನು ಬದಲಿಸಲು ಬಯಸಿದೆ.
ಜು.22ರಿಂದ ಆರಂಭಗೊಳ್ಳುವ ಅಧಿವೇಶನವು ಆ.12ರಂದು ಅಂತ್ಯಗೊಳ್ಳಲಿದೆ.
ಸ್ವಾತಂತ್ರ್ಯಪೂರ್ವದ ಕಾನೂನನ್ನು ಬದಲಿಸಲು ಬಾಯ್ಲರ್ಗಳ ಮಸೂದೆ, ಕಾಫಿ(ಪ್ರಚಾರ ಮತ್ತು ಅಭಿವೃದ್ಧಿ) ಮಸೂದೆ ಮತ್ತು ರಬ್ಬರ್ (ಪ್ರಚಾರ ಮತ್ತು ಅಭಿವೃದ್ಧಿ) ಮಸೂದೆ ಇವು ಅಧಿವೇಶನದಲ್ಲಿ ಮಂಡನೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿ ಮಾಡಿರುವ ಇತರ ವಿಧೇಯಕಗಳಾಗಿವೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಂಸದೀಯ ಕಾರ್ಯಸೂಚಿಯನ್ನು ನಿರ್ಧರಿಸಲು ಸುದೀಪ್ ಬಂಡೋಪಾಧ್ಯಾಯ (ಟಿಎಂಸಿ) ಅಧ್ಯಕ್ಷತೆಯಲ್ಲಿ ಕಲಾಪ ಸಲಹಾ ಸಮಿತಿಯನ್ನೂ ರಚಿಸಿದ್ದಾರೆ.
ಪ.ಪಿ.ಚೌಧರಿ(ಬಿಜೆಪಿ), ಲವು ಶ್ರೀಕೃಷ್ಣ ದೇವರಾಯಲು (ಟಿಡಿಪಿ),ನಿಶಿಕಾಂತ್ ದುಬೆ(ಬಿಜೆಪಿ), ಗೌರವ್ ಗೊಗೊಯಿ (ಕಾಂಗ್ರೆಸ್), ಸಂಜಯ್ ಜೈಸ್ವಾಲ್( ಬಿಜೆಪಿ), ದಿಲೇಶ್ವರ ಕಮಾಯಿತ್(ಜೆಡಿಯು), ಭರ್ತೃಹರಿ ಮಹತಾಬ್(ಬಿಜೆಪಿ), ದಯಾನಿಧಿ ಮಾರನ್(ಡಿಎಂಕೆ), ಬೈಜಯಂತ್ ಪಂಡಾ (ಬಿಜೆಪಿ),ಅರವಿಂದ ಸಾವಂತ(ಶಿವಸೇನೆ-ಯುಬಿಟಿ), ಕೊಡಿಕುನ್ನಿಲ್ ಸುರೇಶ್(ಕಾಂಗ್ರೆಸ್), ಅನುರಾಗ್ ಠಾಕೂರ್ (ಬಿಜೆಪಿ) ಮತ್ತು ಲಾಲ್ಜಿ ವರ್ಮಾ( ಎಸ್ಪಿ) ಅವರು ಸಮಿತಿಯ ಸದಸ್ಯರಾಗಿದ್ದಾರೆ.