ಸರ್ವಪಕ್ಷ ಸಭೆ | ಉಪಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ ಬೇಡಿಕೆ
ಬಿಹಾರ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಜೆಡಿಯು, ವೈಎಸ್ಆರ್ಸಿಪಿ ಆಗ್ರಹ
Photo : PTI
ಹೊಸದಿಲ್ಲಿ : ಸಂಸತ್ ಅಧಿವೇಶನಕ್ಕೆ ಮುನ್ನ ರವಿವಾರ ಸರಕಾರವು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರತಿಪಕ್ಷಕ್ಕೆ ಲೋಕಸಭಾ ಉಪಸ್ಪೀಕರ್ ಸ್ಥಾನಕ್ಕಾಗಿ ಬೇಡಿಕೆ ಮಂಡಿಸಿದ ಕಾಂಗ್ರೆಸ್, ಪ್ರತಿಷ್ಠಿತ ನೀಟ್ ಸೇರಿದಂತೆ ಪ್ರಶ್ನೆಪತ್ರಿಕೆ ಸೋರಿಕೆಗಳ ವಿಷಯವನ್ನು ಪ್ರಸ್ತಾಪಿಸಿತು ಎಂದು ಬಲ್ಲ ಮೂಲಗಳು ತಿಳಿಸಿವೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಉಭಯ ಸದನಗಳನ್ನು ಸುಗಮವಾಗಿ ನಡೆಸಲು ಪ್ರತಿಪಕ್ಷದ ಸಹಕಾರವನ್ನು ಕೋರಿದ ಬಳಿಕ ಕಾಂಗ್ರೆಸ್ ನಾಯಕ ಗೌರವ ಗೊಗೊಯಿ ಅವರು, ಸಂಸತ್ತಿನಲ್ಲಿ ವಿಷಯಗಳನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳಿಗೆ ಅವಕಾಶ ನೀಡಬೇಕು ಎಂದು ಹೇಳಿದರು.
ಸಭೆಯ ಬಳಿಕ ಸುದ್ದಿಗಾರರಿಗೆ ವಿವರಗಳನ್ನು ನೀಡಿದ ರಿಜಿಜು, 44 ಪಕ್ಷಗಳ 55 ನಾಯಕರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದು, ಉಪಯುಕ್ತ ಚರ್ಚೆಗಳು ನಡೆದವು ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹಿಂದಿನ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ವೇಳೆ ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯನ್ನು ಉಲ್ಲೇಖಿಸಿ, ಸಂಸತ್ತಿನಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದು ಹೇಳಿದರು.
ಸಭೆಯಲ್ಲಿ ಎಸ್ಪಿ ಸಂಸದ ರಾಮಗೋಪಾಲ ಯಾದವ ಅವರು, ‘ಕನ್ವರಿಯಾ’ ಯಾತ್ರೆಯ ಮಾರ್ಗದಲ್ಲಿಯ ಹೋಟೆಲ್ ಗಳಿಗೆ ಮಾಲಿಕರ ಹೆಸರುಗಳನ್ನು ಪ್ರದರ್ಶಿಸುವಂತೆ ಉತ್ತರ ಪ್ರದೇಶ ಸರಕಾರದ ವಿವಾದಾತ್ಮಕ ನಿರ್ದೇಶನವನ್ನು ಪ್ರಸ್ತಾಪಿಸಿದರು.
ಆಂಧ್ರಪ್ರದೇಶದಲ್ಲಿ ಟಿಡಿಪಿ ಸರಕಾರವು ತನ್ನ ನಾಯಕರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ ವೈಎಸ್ಆರ್ಸಿಪಿ, ಕೇಂದ್ರದ ಹಸ್ತಕ್ಷೇಪವನ್ನು ಕೋರಿತು. ಆಂಧ್ರಪ್ರದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ ಎಂದು ಪ್ರತಿಪಾದಿಸಿದ ಅದು, ಇದಕ್ಕೆ ರಾಷ್ಟ್ರಪತಿಗಳ ಆಡಳಿತವೊಂದೇ ಪರಿಹಾರ ಎಂದು ಹೇಳಿತು.
ಒಡಿಶಾ ರಾಜ್ಯಪಾಲರ ಪುತ್ರನಿಂದ ರಾಜಭವನದ ಅಧಿಕಾರಿಯೋರ್ವರ ಮೇಲೆ ಹಲ್ಲೆಯನ್ನು ಪ್ರಸ್ತಾಪಿಸಿದ ಬಿಜೆಡಿ, ಆತ ಕಾನೂನಿಗಿಂತ ಮೇಲೆ ಎಂಬಂತೆ ಕಾಣುತ್ತಿದೆ ಎಂದು ಹೇಳಿತು.
ಆಡಳಿತಾರೂಢ ಎನ್ಡಿಎದಲ್ಲಿ ಪ್ರಮುಖ ಮಿತ್ರಪಕ್ಷವಾಗಿರುವ ಜೆಡಿಯು ಇತ್ತೀಚಿಗೆ ಬಿಹಾರಕ್ಕೆ ವಿಶೇಷ ವರ್ಗ ಸ್ಥಾನಮಾನ ಅಥವಾ ಪ್ಯಾಕೇಜ್ ಗಾಗಿ ಆಗ್ರಹಿಸಿ ನಿರ್ಣಯವೊಂದನ್ನು ಅಂಗೀಕರಿಸಿದೆ.
ರಾಜ್ಯಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಂಧ್ರಪ್ರದೇಶದ ನಾಯಕರು ಒತ್ತಾಯಿಸುತ್ತಿದ್ದರೂ ಲೋಕಸಭಾ ಚುನಾವಣೆಗಳ ಬಳಿಕ ಈ ಬೇಡಿಕೆ ಮತ್ತೊಮ್ಮೆ ಕಾವು ಪಡೆದುಕೊಂಡಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೈರಾಂ ರಮೇಶ್, ಸಂಸದರು ಪರಸ್ಪರರೊಂದಿಗೆ ಬೆರೆಯಲು ಸೆಂಟ್ರಲ್ ಹಾಲ್ ಮತ್ತೆ ತೆರೆಯಬೇಕು ಎಂಬ ಸಾರ್ವತ್ರಿಕ ಬೇಡಿಕೆ ಸಭೆಯಲ್ಲಿ ವ್ಯಕ್ತವಾಗಿತ್ತು. ನೂತನ ಸಂಸತ್ ಕಟ್ಟಡದ ಉದ್ಘಾಟನೆಯ ಬಳಿಕ ಐತಿಹಾಸಿಕ ಸೆಂಟ್ರಲ್ ಹಾಲ್ ನಿರುಪಯುಕ್ತವಾಗಿದೆ ಎಂದು ತಿಳಿಸಿದರು.
ಸಂಸತ್ತಿನ ಬಜೆಟ್ ಅಧಿವೇಶನ ಸೋಮವಾರದಿಂದ ಆರಂಭಗೊಳ್ಳಲಿದ್ದು, ಅಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಕೇಂದ್ರ ಮುಂಗಡಪತ್ರವನ್ನು ಮಂಡಿಸಲಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಹಿಡಿದು ರೈಲ್ವೆ ಸುರಕ್ಷತೆವರೆಗೆ ವಿವಿಧ ವಿಷಯಗಳಲ್ಲಿ ಎನ್ಡಿಎ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.
ಸಂಸತ್ತಿನ ಸುಗಮ ಕಾರ್ಯ ನಿರ್ವಹಣೆ ಸರಕಾರ ಮತ್ತು ಪ್ರತಿಪಕ್ಷದ ಸಾಮೂಹಿಕ ಜವಾಬ್ದಾರಿಯಾಗಿದೆ ಹಾಗೂ ನಿಯಮಗಳಿಗೆ ಅನುಸಾರ ಸಂಸತ್ತಿನಲ್ಲಿ ಯಾವುದೇ ವಿಷಯದ ಬಗ್ಗೆ ಚರ್ಚೆಗೆ ಸರಕಾರವು ಮುಕ್ತ ಮನಸ್ಸು ಹೊಂದಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಹೇಳಿದ್ದಾರೆ.
ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಅವರು, ಜೆಡಿಯು ಮತ್ತು ವೈಎಸ್ಆರ್ಸಿಪಿ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸಿದ್ದರೂ ವಿಚಿತ್ರವೆಂಬಂತೆ ಈ ವಿಷಯದಲ್ಲಿ ಟಿಡಿಪಿ ಮೌನ ವಹಿಸಿದೆ ಎಂದು ಕುಟುಕಿದರು. ವೈಎಸ್ಆರ್ಸಿಪಿ ಸಂಸದ ವಿಜಯ ಸಾಯಿ ರೆಡ್ಡಿ ಅವರೂ ಆಂಧ್ರಕ್ಕೆ ವಿಶೇಷ ಸ್ಥಾನಮಾನದ ವಿಷಯದಲ್ಲಿ ಟಿಡಿಪಿಯ ಮೌನವನ್ನು ಪ್ರಶ್ನಿಸಿದರು.