ಮುಂಗಾರು ಅಧಿವೇಶನ | ಭಾರಿ ಮಳೆಯಿಂದಾಗಿ ಉತ್ತರ ಪ್ರದೇಶ ವಿಧಾನಸಭೆ ಕಟ್ಟಡಕ್ಕೆ ನುಗ್ಗಿದ ನೀರಿನ ಪ್ರವಾಹ
PC : PTI
ಲಕ್ನೊ : ಉತ್ತರ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬುಧವಾರ ರಾಜ್ಯ ವಿಧಾನಸಭಾ ಅಧಿವೇಶನ ನಡೆಯುವಾಗಲೇ ವಿಧಾನಸಭೆ ಕಟ್ಟಡದ ಕೆಲ ಭಾಗಗಳಿಗೆ ನೀರಿನ ಪ್ರವಾಹ ನುಗ್ಗಿರುವ ಘಟನೆ ವರದಿಯಾಗಿದೆ.
ಸತತ ಎರಡು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ರಾಜ್ಯ ರಾಜಧಾನಿಯ ಕೆಲ ಭಾಗಗಳು ಜಲಾವೃತಗೊಂಡಿದ್ದಲ್ಲದೆ, ವಿಧಾನ್ ಭವನ್ ಗೂ ನೀರಿನ ಪ್ರವಾಹ ನುಗ್ಗಿತು.
ಸಾಮಾನ್ಯವಾಗಿ ಶಾಸಕರು ಪ್ರವೇಶಿಸುವ ವಿಧಾನಸಭೆ ಕಟ್ಟಡದ ಭಾಗವು ಜಲಾವೃತಗೊಂಡಿತ್ತು ಹಾಗೂ ವಿಧಾನಸಭೆ ಕಟ್ಟಡ ನೆಲ ಅಂತಸ್ತಿನಲ್ಲಿನ ಕಾರಿಡಾರ್ ಹಾಗೂ ಕೆಲ ಕೊಠಡಿಗಳಿಗೆ ನೀರಿನ ಪ್ರವಾಹ ನುಗ್ಗಿತ್ತು. ವಿಧಾನಸಭೆಯ ಸಿಬ್ಬಂದಿಗಳು ನೀರನ್ನು ಹೊರ ಹಾಕಲು ಬಕೆಟ್ ಗಳು ಹಾಗೂ ನೆಲವೊರಸಿನ ಮೊರೆ ಹೋಗುವಂತಾಯಿತು. ಈ ಪರಿಸ್ಥಿತಿಯ ಕುರಿತು ವಿರೋಧ ಪಕ್ಷಗಳಿಂದ ತೀಕ್ಷ್ಣ ಟೀಕೆಗಳು ಕೇಳಿ ಬಂದವು.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯ ಮದಲ್ಲಿ ಪೋಸ್ಟ್ ಮಾಡಿರುವ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಶಿವಪಾಲ್ ಸಿಂಗ್ ಯಾದವ್, “ರಾಜ್ಯ ವಿಧಾನಸಭೆಗೆ ಬಜೆಟ್ ನ ಬಹುಪಾಲು ಅಗತ್ಯವಿದೆ. ಕೇವಲ ಒಂದು ಮಳೆಗೇ ಈ ಪರಿಸ್ಥಿತಿಯಾದರೆ, ರಾಜ್ಯದ ಉಳಿದ ಭಾಗಗಳು ದೇವರ ಕೃಪೆಯಲ್ಲಿವೆ” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಆದರೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪಗಳನ್ನು ನಡೆಸುವ ಕೊಠಡಿಗಳು ಈ ಪ್ರವಾಹದಿಂದ ಹಾನಿಗೀಡಾಗಿಲ್ಲ.
ಪ್ರವಾಹದಿಂದ ತೊಂದರೆಗೀಡಾಗಿರುವ ಪ್ರದೇಶಗಳ ಪೈಕಿ ಲಕ್ನೊದ ಹೃದಯ ಭಾಗದಲ್ಲಿರುವ ಹಝರತ್ ಗಂಜ್ ಚೌಕ್ ಕೂಡಾ ಸೇರಿದೆ.