ಮೇ 31ರಂದು ಕೇರಳಕ್ಕೆ ಮುಂಗಾರು ಪ್ರವೇಶ
ಸಾಂದರ್ಭಿಕ ಚಿತ್ರ | PC : PTI
ತಿರುವನಂತಪುರ : ನೈಋತ್ಯ ಮುಂಗಾರು ಮಾರುತವು ಮೇ 31ರೊಳಗೆ ಕೇರಳವನ್ನು ತಲುಪಲಿದೆಯೆಂದು ಭಾರತೀಯ ಹವಾಮಾನ ಇಲಾಖೆ ರವಿವಾರ ಮುನ್ಸೂಚನೆ ನೀಡಿದೆ.
‘‘ ಸಾಮಾನ್ಯವಾಗಿ ನೈಋತ್ಯ ಮುಂಗಾರು ಮಾರುತವು ಜೂನ್ 1ರಂದು ಕೇರಳವನ್ನು ಪ್ರವೇಶಿಸುತ್ತದೆ. ಆದರೆ ಈ ವರ್ಷ ಅದು ಮೇ 31ರಂದು ಕೇರಳಕ್ಕೆ ಆಗಮಿಸಲಿದೆ’’ ಎಂದು ಐಎಂಟಿ ಹೇಳಿಕೆ ತಿಳಿಸಿದೆ.
ಮುಂಬರುವ ದಿನಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ. ಕೇರಳದ ಮೂರು ಜಿಲ್ಲೆಗಳಲ್ಲಿ ರೆಡ್ ಆಲರ್ಟ್ ಘೋಷಣೆಯಾಗಲಿದೆ. ತಮಿಳುನಾಡು,ಪುದುಚೇರಿ, ಕಾರೈಕಲ್ ಹಾಗೂ ಮಾಹೆಯಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಕರ್ನಾಟಕದ ಒಳನಾಡು ಪ್ರದೇಶಗಳಲ್ಲಿಯೂ ಮಂಗಳವಾರದವರೆಗೆ ಮಳೆಯಾಗಲಿದೆ.
ಕೇರಳದ ಪಟ್ಟಣಂತಿಟ್ಟ, ಕೊಟ್ಟಾಯಂ ಹಾಗೂ ಇಡುಕ್ಕಿ ಜಿಲ್ಲೆಗಳಲ್ಲಿ ರವಿವಾರ ಹಾಗೂ ಸೋಮವಾರ ರೆಡ್ ಆಲರ್ಟ್ ಘೋಷಣೆಯಾಗಲಿದೆ. ತಿರುವನಂತಪುರ, ಕೊಲ್ಲಂ, ಅಲಪ್ಪುಳ ಹಾಊ ಎರ್ನಾಕುಳಂನಲ್ಲಿ ಎರಡು ದಿನಗಳವರೆಗೆ ಆರೆಂಜ್ ಆಲರ್ಟ್ ಘೋಷಣೆಯಾಗಲಿದೆ.
ಬಿಸಿಲ ಬೇಗೆಯಿಂದ ಬೇಯುತ್ತಿರುವ ದೇಶದ ಜನತೆಗೆ ಮುಂಗಾರಿನ ಆಗಮನವು ಸುದ್ದಿಯು ಮಂದಹಾಸವನ್ನು ಮೂಡಿಸಿದೆ. ಭಾರತದಲಿ ಈ ಸಲದ ಮುಂಗಾರು ಋತುವಿನಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಲಿದೆಯೆಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.