ನಿರಂತರ 3 ದಿನ ಗೈರಾದ 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು!
ಬಿಹಾರ: ಗೈರಾದವರ ಹೆಸರು ತೆಗೆದು ಹಾಕಿದ ಸರಕಾರಿ ಶಾಲೆಗಳು
ಸಾಂದರ್ಭಿಕ ಚಿತ್ರ (PTI)
ಪಾಟ್ನಾ : ಬಿಹಾರದ ಸರಕಾರಿ ಶಾಲೆಗಳು ಸತತ ಮೂರು ದಿನಗಳು ಗೈರು ಹಾಜರಾದ 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಹೆಸರುಗಳನ್ನು ತೆಗೆದು ಹಾಕಿವೆ.
ರಾಜ್ಯದ 38 ಜಿಲ್ಲೆಗಳಲ್ಲಿರುವ 70 ಸಾವಿರಕ್ಕೂ ಅಧಿಕ ಶಾಲೆಗಳು ಇದುವರೆಗೆ 1ನೇ ತರಗತಿಯಿಂದ 12ನೇ ತರಗತಿವರೆಗೆ ದಾಖಲಾದ ವಿದ್ಯಾರ್ಥಿಗಳ ಹೆಸರುಗಳನ್ನು ತೆಗೆದು ಹಾಕಿವೆ ಎಂಬುದನ್ನು ಬಿಹಾರ ಶಿಕ್ಷಣ ಇಲಾಖೆ ಸಂಗ್ರಹಿಸಿದ ದತ್ತಾಂಶ ತಿಳಿಸಿದೆ.
ಈ 20 ಲಕ್ಷ ವಿದ್ಯಾರ್ಥಿಗಳ ಪೈಕಿ 1.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು 10 ಹಾಗೂ 12ನೇ ತರಗತಿಯಲ್ಲಿ ಇದ್ದಾರೆ. ಇವರು ತಮ್ಮ ರಾಜ್ಯ ಮಂಡಳಿ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ.
ಬಿಹಾರದ ಸೆಕೆಂಡರಿ ಎಜುಕೇಶನ್ನ ನಿರ್ದೇಶಕ ಕನ್ಹಯ ಪ್ರಸಾದ್ ಶ್ರೀವಾತ್ಸವ್, ಹೆಸರುಗಳನ್ನು ತೆಗೆಯಲಾದ 10 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳು ರಾಜ್ಯ ಮಂಡಳಿ ಪರೀಕ್ಷೆಗಳನ್ನು ಬರೆಯದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಕಳೆದ ನಾಲ್ಕು ತಿಂಗಳು ಸರಕಾರಿ ಶಾಲೆಗಳಲ್ಲಿ ತಪಾಸಣೆ ನಡೆಸಿದ ಬಳಿಕ 30 ದಿನಗಳ ಕಾಲ ಗೈರು ಹಾಜರಾದ ವಿದ್ಯಾರ್ಥಿಗಳ ಹೆಸರನ್ನು ತೆಗೆದು ಹಾಕುವಂತೆ ಶಿಕ್ಷಣ ಇಲಾಖೆ ಶಾಲೆಗಳಿಗೆ ತಿಳಿಸಿದೆ.
ಅನಂತರ ಈ ಅವಧಿಯನ್ನು 15 ದಿನಕ್ಕೆ ಇಳಿಸಲಾಗಿತ್ತು. ತರುವಾಯ ಅಧ್ಯಾಪಕರಿಗೆ ಮಾಹಿತಿ ನೀಡದೆ ನಿರಂತರ 3 ದಿನಗಳು ಗೈರು ಹಾಜರಾದ ವಿದ್ಯಾರ್ಥಿಗಳ ಹೆಸರನ್ನು ತೆಗೆದು ಹಾಕಲು ಶಾಲೆಗಳಿಗೆ ಅನುಮತಿ ನೀಡಲಾಯಿತು.
ಸರಕಾರದ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಉಪಯೋಗವಾಗಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆಯ ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.