ಜಿಎಸ್‌ಟಿ ತಪ್ಪಿಸುತ್ತಿರುವ 650ಕ್ಕೂ ಅಧಿಕ ಗೇಮಿಂಗ್ ಕಂಪನಿಗಳು: ವರದಿ
ಹೊಸದಿಲ್ಲಿ: 658 ಕಡಲಾಚೆಯ ಆನ್‌ಲೈನ್ ಗೇಮಿಂಗ್ ಕಂಪನಿಗಳನ್ನು ನೋಂದಾಯಿತವಲ್ಲದ ಮತ್ತು ನಿಯಮ ಪಾಲಿಸದ ಕಂಪನಿಗಳೆಂದು ಗುರುತಿಸಿರುವ ಜಿಎಸ್‌ಟಿ ಇಲಾಖೆಯು ಅವುಗಳ ವಿರುದ್ಧ ತನಿಖೆಯನ್ನು ಆರಂಭಿಸಿದೆ. 167 ಯುಆರ್‌ಎಲ್/ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವಂತೆ ಅದು ಶಿಫಾರಸು ಮಾಡಿದೆ.
ಜಿಎಸ್‌ಟಿ ಇಲಾಖೆಯ ತನಿಖಾ ಘಟಕ ಜಿಎಸ್‌ಟಿ ಗುಪ್ತಚರ ಮಹಾ ನಿರ್ದೇಶನಾಲಯ(ಡಿಜಿಜಿಐ)ವು ತನ್ನ ವಾರ್ಷಿಕ ವರದಿಯಲ್ಲಿ, ರಿಯಲ್ ಮನಿ ಆನ್‌ಲೈನ್ ಗೇಮಿಂಗ್ ಕಂಪನಿಗಳು ವಿತ್ತವರ್ಷ 2024ರಲ್ಲಿ 82,000 ಕೋಟಿ ರೂ.ಗಳಷ್ಟು ಬೃಹತ್ ಮೊತ್ತದ ಜಿಎಸ್‌ಟಿಯನ್ನು ವಂಚಿಸಿದ್ದು, ಇದು ಸದ್ರಿ ವರ್ಷದಲ್ಲಿ ಪತ್ತೆಯಾಗಿರುವ ಒಟ್ಟು ಎರಡು ಲಕ್ಷ ಕೋಟಿ ರೂ. ಜಿಎಸ್‌ಟಿ ವಂಚನೆಯ ಶೇ.41ರಷ್ಟಿದೆ ಎನ್ನುವುದನ್ನು ಬಹಿರಂಗಗೊಳಿಸಿದೆ.
ಇಲಾಖೆಯು 118 ದೇಶಿಯ ಆನ್‌ಲೈನ್ ಗೇಮಿಂಗ್ ಕಂಪನಿಗಳ ವಿರುದ್ಧ ಕ್ರಮಗಳನ್ನು ಆರಂಭಿಸಿದೆ ಮತ್ತು 1,10,531.91 ಕೋಟಿ ರೂ.ಗಳ ತೆರಿಗೆ ಬಾಕಿಗಾಗಿ 34 ತೆರಿಗೆದಾರರಿಗೆ ಶೋಕಾಸ್ ನೋಟಿಸ್‌ಗಳನ್ನು ಹೊರಡಿಸಿದೆ ಎಂದು ವರದಿಯು ತಿಳಿಸಿದೆ.
ಹೆಚ್ಚಿನ ಆಫ್‌ಶೋರ್ ಗೇಮಿಂಗ್ ಕಂಪನಿಗಳು ಮಾಲ್ಟಾ, ಕ್ಯುರಸಾವ್ ಐಲ್ಯಾಂಡ್ಸ್, ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್, ಸೈಪ್ರಸ್‌ನಂತಹ ತಮ್ಮ ಅಪಾರದರ್ಶಕತೆಗೆ ಹೆಸರಾಗಿರುವ ತೆರಿಗೆ ಸ್ವರ್ಗಗಳಲ್ಲಿ ಸ್ಥಾಪಿಸಲ್ಪಟ್ಟಿವೆ, ಹೀಗಾಗಿ ಅವುಗಳನ್ನು ತೆರಿಗೆ ವ್ಯಾಪ್ಯಿಯಲ್ಲಿ ತರುವುದು ಸವಾಲಿನ ಕೆಲಸವಾಗಿದೆ ಎಂದು ಇಲಾಖೆಯು ಹೇಳುತ್ತದೆ.
ಆನ್‌ಲೈನ್ ಗೇಮಿಂಗ್ ಪ್ಲ್ಯಾಟ್‌ಫಾರ್ಮ್‌ಗಳು ತೆರಿಗೆ ಅನುಸರಣೆಯನ್ನು ತಪ್ಪಿಸಲು ತಮ್ಮ ಯುಆರ್‌ಎಲ್/ವೆಬ್‌ಸೈಟ್/ಆ್ಯಪ್‌ಗಳನ್ನು ಬದಲಿಸುತ್ತಲೇ ಇರುತ್ತವೆ ಮತ್ತು ಡಾರ್ಕ್ ವೆಬ್ ಅಥವಾ ವಿಪಿಎನ್ ಆಧಾರಿತ ಪ್ಲ್ಯಾಟ್‌ಫಾರ್ಮ್‌ಗಳ ಬಳಕೆಯು ತೆರಿಗೆ ಕಾನೂನು ಜಾರಿಗೆ ಅಡ್ಡಿಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ ಎಂದು ಡಿಜಿಜಿಐ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.
ಈ ನಡುವೆ ಜಿಎಸ್‌ಟಿ ಇಲಾಖೆಯು ವಿತ್ತವರ್ಷ 2024ರಲ್ಲಿ ಭಾರತೀಯ ಘಟಕಗಳಿಗೆ ಡಿಜಿಟಲ್ ಸೇವೆಗಳನ್ನು ಒದಗಿಸುವ ಕಡಲಾಚೆಯ 574 ಘಟಕಗಳಿಂದ 2,675 ಕೋ.ರೂ.ಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ವಿತ್ತವರ್ಷ 2017-18ರಲ್ಲಿ 80 ಕೋಟಿ ರೂ.ಗಳಷ್ಟಿದ್ದ ಕಡಲಾಚೆಯ ಘಟಕಗಳಿಂದ ವಾರ್ಷಿಕ ಆದಾಯವು ವಿತ್ತವರ್ಷ 2024ರಲ್ಲಿ 2,675 ಕೋಟಿ ರೂ.ಗಳಿಗೆ ಏರಿದೆ.
ಜಿಎಸ್‌ಟಿ ಪರಿಭಾಷೆಯಲ್ಲಿ ಅಂತರ್ಜಾಲ ಅಥವಾ ವಿದ್ಯುನ್ಮಾನ ಜಾಲಗಳ ಮೂಲಕ ವಿತರಿಸಲಾಗುವ ಸೇವೆಗಳನ್ನು ಆನ್‌ಲೈನ್ ಮಾಹಿತಿ ಮತ್ತು ಡೇಟಾಬೇಸ್ ಪ್ರವೇಶ ಅಥವಾ ಮರುಪಡೆಯುವಿಕೆ ಸೇವೆಗಳು(ಒಐಡಿಎಆರ್ ಸೇವೆಗಳು) ಎಂದು ಕರೆಯಲಾಗುತ್ತದೆ. ಕ್ಲೌಡ್ ಸೇವೆಗಳು, ಡಿಜಿಟಲ್ ಕಂಟೆಂಟ್, ಆನ್‌ಲೈನ್ ಗೇಮಿಂಗ್,ಆನ್‌ಲೈನ್ ಜಾಹೀರಾತು ಇತ್ಯಾದಿಗಳು ಈ ಸೇವೆಗಳಲ್ಲಿ ಸೇರಿವೆ. ಡಿಜಿಜಿಐ ಪ್ರಕಾರ,ತೆರಿಗೆ ವಿಧಿಸಬಹುದಾದ ಪ್ರದೇಶದಲ್ಲಿಯ ಕಡಲಾಚೆಯ ಘಟಕವು ಇಂತಹ ಸೇವೆಗಳನ್ನು ಒದಗಿಸಿದಾಗ ಅದು ನೋಂದಣಿಯನ್ನು ಪಡೆದುಕೊಳ್ಳುವ ಮತ್ತು ಅದರ ಮೇಲೆ ಜಿಎಸ್‌ಟಿಯನ್ನು ಪಾವತಿಸುವ ಬಾಧ್ಯತೆಯನ್ನು ಹೊಂದಿರುತ್ತದೆ.
ಸೇವಾ ಪೂರೈಕೆದಾರರು ವಿದೇಶಗಳಲ್ಲಿ ನೆಲೆಸಿರುವುದು ಮತ್ತು ತಮ್ಮ ಸೇವೆಗಳಿಗೆ ಭಾರತ ಸರಕಾರಕ್ಕೆ ತೆರಿಗೆಯನ್ನು ಪಾವತಿಸುವ ಬಾಧ್ಯತೆಯನ್ನು ಹೊಂದಿರುವುದು ಜಿಎಸ್‌ಟಿ ಜಾರಿಗೆ ಸವಾಲುಗಳನ್ನು ಒಡ್ಡುತ್ತದೆ,ಆದರೂ ಡಿಜಿಜಿಐ ಪ್ರಯತ್ನಗಳಿಂದಾಗಿ ಇಂತಹ ಸೇವಾ ಪೂರೈಕೆದಾರರು ನೋಂದಣಿಗಳನ್ನು ಪಡೆದುಕೊಳ್ಳುತ್ತಿದ್ದಾರೆ ಮತ್ತು ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಡಿಜಿಜಿಐ ಪ್ರಕಾರ ಇಂತಹ ಹಲವಾರು ಕಡಲಾಚೆಯ ಸೇವಾ ಪೂರೈಕೆದಾರರಿಗೆ ಕಾನೂನಿನ ಜ್ಞಾನವಿಲ್ಲ ಮತ್ತು ಕಾನೂನಿನ ನಿಲುವನ್ನು ಸ್ಪಷ್ಟವಾಗಿ ತಿಳಿಸಿದಾಗ ಜಿಎಸ್‌ಟಿ ಆದೇಶವನ್ನು ಪಾಲಿಸಲು ಒಪ್ಪಿಕೊಳ್ಳುತ್ತಿದ್ದಾರೆ.
ಸಹಕರಿಸದ ಮತ್ತು ತೆರಿಗೆ ಪಾವತಿಯನ್ನು ಉದ್ದೇಶಪೂರ್ವಕವಾಗಿ ತಪ್ಪಿಸುವ ಇತರ ಹಲವಾರು ಘಟಕಗಳಿದ್ದು,ಈ ಪೈಕಿ ಹೆಚ್ಚಿನವು ತೆರಿಗೆ ಸ್ವರ್ಗಗಳಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಡಿಜಿಜಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.