ಸಿಬಿಐ ತನಿಖೆ ನಡೆಸಿದ 6,800ಕ್ಕೂ ಹೆಚ್ಚಿನ ಭ್ರಷ್ಟಾಚಾರ ಪ್ರಕರಣಗಳು ವಿಚಾರಣೆಗಾಗಿ ಕಾಯುತ್ತಿವೆ: ಸಿವಿಸಿ ವರದಿ

CBI | Photo: PTI
ಹೊಸದಿಲ್ಲಿ: ಸಿಬಿಐ ತನಿಖೆ ನಡೆಸಿರುವ 6,800ಕ್ಕೂ ಅಧಿಕ ಭ್ರಷ್ಟಾಚಾರ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗಾಗಿ ಬಾಕಿಯಿದ್ದು,ಈ ಪೈಕಿ 313 ಪ್ರಕರಣಗಳು 20 ವರ್ಷಗಳಿಗೂ ಹೆಚ್ಚು ಹಳೆಯದಾಗಿವೆ ಎಂದು ಕೇಂದ್ರ ಜಾಗ್ರತ ಆಯೋಗ (ಸಿವಿಸಿ)ವು ವರದಿ ಮಾಡಿದೆ.
ಇತ್ತೀಚಿಗೆ ಬಿಡುಗಡೆಗೊಂಡ ಸಿವಿಸಿಯ ವಾರ್ಷಿಕ ವರದಿಯಂತೆ 2022, ಡಿ.31ಕ್ಕೆ ಇದ್ದಂತೆ 2039 ಪ್ರಕರಣಗಳು 10ರಿಂದ 20 ವರ್ಷ,2,324 ಪ್ರಕರಣಗಳು 5ರಿಂದ 10 ವರ್ಷ,842 ಪ್ರಕರಣಗಳು 3ರಿಂದ 5ವರ್ಷಗಳಿಂದ ವಿಚಾರಣೆಗೆ ಬಾಕಿಯಿವೆ. 1,323 ಪ್ರಕರಣಗಳು ಮೂರು ವರ್ಷಗಳಿಗೂ ಕಡಿಮೆ ಅವಧಿಯಿಂದ ಬಾಕಿಯಿವೆ.
ಅಲ್ಲದೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಒಟ್ಟು 12,408 ಮೇಲ್ಮನವಿಗಳು ಮತ್ತು ಪರಿಷ್ಕರಣೆ ಅರ್ಜಿಗಳು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ಬಾಕಿಯಿವೆ. ಈ ಪೈಕಿ 417 ಅರ್ಜಿಗಳು 20 ವರ್ಷಗಳಿಗೂ ಹೆಚ್ಚು ಸಮಯದಿಂದ ವಿಚಾರಣೆಗೆ ಬಾಕಿಯಿವೆ.
692 ಪ್ರಕರಣಗಳು ಸಿಬಿಐ ತನಿಖೆಗೆ ಬಾಕಿಯಿದ್ದು,ಈ ಪೈಕಿ 42 ಪ್ರಕರಣಗಳಲ್ಲಿ ಐದು ವರ್ಷಗಳಿಗೂ ಅಧಿಕ ಸಮಯದಿಂದ ಯಾವುದೇ ಪ್ರಗತಿಯಾಗಿಲ್ಲ ಎಂದು ವರದಿಯು ಬೆಟ್ಟು ಮಾಡಿದೆ.
ನಿರೀಕ್ಷೆಯಂತೆ ಸಾಮಾನ್ಯವಾಗಿ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡ ಒಂದು ವರ್ಷದೊಳಗೆ ತನಿಖೆಯನ್ನು ಪೂರ್ಣಗೊಳಿಸಬೇಕು. ಆದರೆ 60 ಪ್ರಕರಣಗಳು 3ರಿಂದ 5ವರ್ಷಕ್ಕೂ ಹೆಚ್ಚಿನ ಸಮಯದಿಂದ ತನಿಖೆಗೆ ಬಾಕಿಯಿವೆ.
ಅಲ್ಲದೆ ಸಿಬಿಐನ ಗ್ರೂಪ್ ಎ ಅಧಿಕಾರಿಗಳ ವಿರುದ್ಧವೇ 52 ಇಲಾಖಾ ಕ್ರಮ ಪ್ರಕರಣಗಳು ಬಾಕಿಯಿವೆ.
ಅತಿಯಾದ ಕೆಲಸದ ಹೊರೆ,ಮಾನವ ಶಕ್ತಿಯ ಕೊರತೆ,ಲೆಟರ್ಸ್ ರೊಗೇಟರಿಗೆ ಪ್ರತಿಕ್ರಿಯೆಗಳನ್ನು ಸ್ವೀಕರಿಸುವಲ್ಲಿ ವಿಳಂಬ,ದೂರದ ಸ್ಥಳಗಳಲ್ಲಿ ವಾಸವಿರುವ ಸಾಕ್ಷಿಗಳ ಪತ್ತೆ ಹಚ್ಚುವಿಕೆ ಮತ್ತು ವಿಚಾರಣೆಯಲ್ಲಿ ಹೆಚ್ಚಿನ ಸಮಯ ಇವು ವಿಳಂಬಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ವರದಿಯು ಪಟ್ಟಿ ಮಾಡಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಕಾರ್ಯದ ಮೇಲುಸ್ತುವಾರಿಯನ್ನು ಸಿವಿಸಿ ನಡೆಸುತ್ತದೆ.