ಲೋಕಸಭೆಯಲ್ಲಿ 700ಕ್ಕೂ ಅಧಿಕ ಖಾಸಗಿ ಮಸೂದೆಗಳು ಬಾಕಿ
ಲೋಕಸಭೆ \ Photo: PTI
ಹೊಸದಿಲ್ಲಿ: ಲೋಕಸಭೆಯಲ್ಲಿ ಸದಸ್ಯರ 700ಕ್ಕೂ ಅಧಿಕ ಖಾಸಗಿ ಮಸೂದೆಗಳು ಬಾಕಿಯುಳಿದಿದ್ದು, ಈ ಪೈಕಿ ಹೆಚ್ಚಿನವು ದಂಡ ನಿಬಂಧನೆಗಳು ಮತ್ತು ಚುನಾವಣಾ ಕಾನೂನುಗಳಲ್ಲಿ ತಿದ್ದುಪಡಿಗಳನ್ನು ಕೋರಿವೆ. ಹಲವಾರು ಮಸೂದೆಗಳು ಪ್ರಸಕ್ತ ಲೋಕಸಭೆಯು ರಚನೆಗೊಂಡಿದ್ದ ಜೂನ್ 2019ರಲ್ಲಿ ಮಂಡಿಸಲ್ಪಟ್ಟಿದ್ದರೆ ಕೆಲವು ಮಸೂದೆಗಳು ಈ ವರ್ಷದ ಆಗಸ್ಟ್ನಲ್ಲಿ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲ್ಪಟ್ಟಿದ್ದವು.
ಖಾಸಗಿ ಸದಸ್ಯರ ಮಸೂದೆಗಳು ಸಂಸದರು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಮಂಡಿಸುವ ಮಸೂದೆಗಳಾಗಿವೆ. ಹೊಸ ಕಾನೂನುಗಳನ್ನು ರೂಪಿಸುವ ಅಥವಾ ಅಸ್ತಿತ್ವದಲ್ಲಿರುವ ಕಾನೂನುಗಳಲ್ಲಿ ಬದಲಾವಣೆಗಳನ್ನು ತರುವ ಅಗತ್ಯಗಳನ್ನು ಎತ್ತಿ ತೋರಿಸುವುದು ಖಾಸಗಿ ಮಸೂದೆಗಳ ಮಂಡನೆಯ ಉದ್ದೇಶವಾಗಿದೆ.
ಶುಕ್ರವಾರ ಹೊರಡಿಸಲಾದ ಲೋಕಸಭಾ ಬುಲೆಟಿನ್ ಪ್ರಕಾರ, ಸದನದಲ್ಲಿ ಇಂತಹ 713 ಮಸೂದೆಗಳು ಬಾಕಿಯಿವೆ.
ಈ ಮಸೂದೆಗಳು ಏಕರೂಪ ನಾಗರಿಕ ಸಂಹಿತೆ, ಲಿಂಗ ಸಮಾನತೆ, ಹವಾಮಾನ ಬದಲಾವಣೆ, ಕೃಷಿ, ಅಸ್ತಿತ್ವದಲ್ಲಿರುವ ಕ್ರಿಮಿನಲ್ ಮತ್ತು ಚುನಾವಣಾ ಕಾನೂನುಗಳಿಗೆ ತಿದ್ದುಪಡಿಯಂತಹ ವಿಷಯಗಳಿಗೆ ಸಂಬಂಧಿಸಿವೆ.
ಸಂಸತ್ತು ಅಧಿವೇಶನದಲ್ಲಿರುವಾಗ ಪ್ರತಿ ಶುಕ್ರವಾರದ ದ್ವಿತೀಯಾರ್ಧವನ್ನು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಖಾಸಗಿ ಮಸೂದೆಗಳು ಅಥವಾ ನಿರ್ಣಯಗಳ ಮಂಡನೆ ಅಥವಾ ಅವುಗಳ ಮೇಲೆ ಚರ್ಚೆಗೆ ಮೀಸಲಿರಿಸಲಾಗಿದೆ.
ಖಾಸಗಿ ಮಸೂದೆಯ ಮೇಲಿನ ಚರ್ಚೆಯು ಪೂರ್ಣಗೊಂಡ ಬಳಿಕ ಸಂಬಂಧಿಸಿದ ಸಚಿವರು ಉತ್ತರಿಸುತ್ತಾರೆ ಮತ್ತು ಅದನ್ನು ಹಿಂಪಡೆಯುವಂತೆ ಸದಸ್ಯರನ್ನು ಕೋರುತ್ತಾರೆ.
ಖಾಸಗಿ ಮಸೂದೆಯ ಮೇಲೆ ಮತದಾನ ನಡೆಯುವುದು ತುಂಬ ಅಪರೂಪವಾಗಿದೆ.