ಮಾಸ್ಕೊ ಸಂಗೀತ ಕಾರ್ಯಕ್ರಮದ ಮೇಲೆ ದಾಳಿ ಪ್ರಕರಣ: ಮೃತರ ಸಂಖ್ಯೆ 115 ಕ್ಕೇರಿಕೆ
ನಾಲ್ವರು ಬಂದೂಕುಧಾರಿಗಳ ಸಹಿತ 11 ಮಂದಿಯ ಬಂಧನ ► ದಾಳಿಕೋರರು ಉಕ್ರೇನ್ ಜೊತೆಗೆ ಸಂಪರ್ಕ ಹೊಂದಿದ್ದಾರೆಂದ ರಷ್ಯಾದ ಭದ್ರತಾ ಸಂಸ್ಥೆ
Photo: X
ಮಾಸ್ಕೋ: ರಷ್ಯಾದ ಮಾಸ್ಕೋ ಕನ್ಸರ್ಟ್ ಹಾಲ್ ನಲ್ಲಿ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 115 ಕ್ಕೇರಿದೆ. ಘಟನೆಯಲ್ಲಿ ಸುಮಾರು 145 ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಮಾರಣಾಂತಿಕ ದಾಳಿಯಲ್ಲಿ ನೇರವಾಗಿ ಭಾಗಿಯಾಗಿರುವ ಎಲ್ಲಾ ನಾಲ್ವರು ಬಂದೂಕುಧಾರಿಗಳು ಸೇರಿದಂತೆ 11 ಶಂಕಿತರನ್ನು ರಷ್ಯಾದ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ದಾಳಿಕೋರರು ಉಕ್ರೇನ್ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಗಡಿಯತ್ತ ಸಾಗುತ್ತಿದ್ದರು ಎಂದು ರಷ್ಯಾದ ಭದ್ರತಾ ಸಂಸ್ಥೆ ಹೇಳಿದೆ.
"ಭಯೋತ್ಪಾದಕ ದಾಳಿಯನ್ನು ಮಾಡಿದ ನಂತರ, ಅಪರಾಧಿಗಳು ರಷ್ಯಾ-ಉಕ್ರೇನಿಯನ್ ಗಡಿಯನ್ನು ದಾಟಲು ಉದ್ದೇಶಿಸಿದ್ದರು. ಅವರು ಉಕ್ರೇನಿಯನ್ ಭಾಗದಲ್ಲಿ ಸೂಕ್ತ ಸಂಪರ್ಕಗಳನ್ನು ಹೊಂದಿದ್ದರು" ಎಂದು ಎಫ್ಎಸ್ಬಿ ಹೇಳಿದೆ.
ಅದಾಗ್ಯೂ, ಉಕ್ರೇನ್ ನ ಪ್ರೆಸಿಡೆನ್ಸಿಯು ಈ ದಾಳಿಯೊಂದಿಗೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಅದಾಗ್ಯೂ, ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಮಾಸ್ಕೋದ ಹೊರವಲಯದಲ್ಲಿರುವ ಕನ್ಸರ್ಟ್ ಹಾಲ್ ಮೇಲೆ ದಾಳಿ ಮಾಡಿದ ಬಳಿಕ ತಮ್ಮ ಹೋರಾಟಗಾರರು ಸುರಕ್ಷಿತವಾಗಿ ತಮ್ಮ ನೆಲೆಗಳಿಗೆ ಮರಳಿದ್ದಾರೆ ಎಂದು ಹೇಳಿದೆ.