'ಪಯಂಪುರಿ' ಗೆ 18% ಜಿಎಸ್ಟಿ: ಕೇರಳದ ಸಾಂಪ್ರದಾಯಿಕ ಖಾದ್ಯ ಇನ್ನು ದುಬಾರಿ!

ಸಾಂದರ್ಭಿಕ ಚಿತ್ರ (credit: indiatoday.in)
ತಿರುವನಂತಪುರಂ : 'ಪಯಂಪುರಿ' ಕೇರಳದ ಹೆಸರಾಂತ ಖಾದ್ಯ. 'ಪಯಂಪುರಿ' ಸವಿಯದ ಮಲಯಾಳಿಗಳಿಲ್ಲ. ಕೇರಳಕ್ಕೆ ತೆರಳಿದ ಜನರು 'ಪಯಂಪುರಿ'ಯನ್ನು ನೋಡಿರಬಹುದು ಮತ್ತು ಸವಿದಿರಬಹುದು. ಆದರೆ ಇನ್ನು ಪಯಂಪುರಿ ದುಬಾರಿಯಾಗಿದ್ದು, ಪಯಂಪುರಿಯನ್ನು 18% ಜಿಎಸ್ ಟಿಯಡಿ ಬರುವ ಖಾದ್ಯಗಳಲ್ಲಿ ಪಟ್ಟಿ ಮಾಡಲಾಗಿದೆ.
ಪಯಂಪುರಿಯನ್ನು ಬಾಳೆಹಣ್ಣಿನಿಂದ ತಯಾರಿಸಲಾಗುತ್ತಿದ್ದು, ಇದನ್ನು ಬಾಳೆಹಣ್ಣಿನ ಪಕೋಡಾ ಅಥವಾ ಭಜ್ಜಿ ಎಂದು ಕೂಡ ಕರೆಯಲಾಗುತ್ತದೆ. ಪಯಂಪುರಿ, ನೈಯ್ಯಪ್ಪ ಸೇರಿದಂತೆ ಕೇರಳದ ಕೆಲ ಸಾಂಪ್ರದಾಯಿಕ ಖಾದ್ಯಗಳಿಗೆ 18% ಜಿಎಸ್ ಟಿ ತೆರಿಗೆ ವಿಧಿಸಲಾಗುತ್ತದೆ. ಬೇಕರಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದರೂ, ಸಾಮನ್ಯವಾಗಿ ಮನೆಗಳಲ್ಲಿ ತಯಾರಿಸಲಾಗುತ್ತಿದ್ದ ಈ ಖಾದ್ಯಗಳ ಬೆಲೆಯೇರಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಇದಲ್ಲದೆ ಉನ್ನಿಯಪ್ಪ, ಲಡ್ಡು, ಜಿಲೇಬಿ, ಕಡಲೆಕಾಯಿ ಚಿಕ್ಕಿ 5% GST ಶ್ರೇಣಿಯ ಅಡಿಯಲ್ಲಿ ಬರುತ್ತದೆ. HSN (Harmonised System of Nomenclature) ಕೋಡ್ ಆಧರಿಸಿ ದರ ನಿಗದಿಪಡಿಸಲಾಗಿದೆ. ಕಡಲೆ ಹಿಟ್ಟು ಬಳಸುವುದರಿಂದ ಪಯಂಪುರಿಯನ್ನು 18% ಜಿಎಸ್ ಟಿ ತೆರಿಗೆ ವಿಧಿಸಬಹುದಾದದ ಖಾದ್ಯಗಳಡಿ ಪಟ್ಟಿ ಮಾಡಲಾಗಿದೆ ಎಂದು ಹೇಳಲಾಗಿದೆ. ಬೇಕರ್ಸ್ ಅಸೋಸಿಯೇಷನ್ 20 ಖಾದ್ಯಗಳ ಪಟ್ಟಿ ತಯಾರಿಸಿ ಜಿಎಸ್ಟಿ ಕೌನ್ಸಿಲ್ ಗೆ ನೀಡಿದೆ. ಆದರೆ 9 ಖಾದ್ಯಗಳ ಬಗ್ಗೆ ಮಾತ್ರ ಸ್ಪಷ್ಟತೆ ಸಿಕ್ಕಿದೆ ಎಂದು ಹೇಳಲಾಗಿದೆ.
ಕೇರಳದ ಬೇಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಕಿರಣ್ ಎಸ್ ಪಾಲಕ್ಕಲ್ ಈ ಕುರಿತು ಪ್ರತಿಕ್ರಿಯಿಸಿದ್ದು, ಹಲವಾರು ಖಾದ್ಯಗಳು ಒಂದೇ ರೀತಿಯ ಅತ್ಯಧಿಕ ತೆರಿಗೆ ದರದ ವ್ಯಾಪ್ತಿಗೆ ಬರುತ್ತದೆ. ಏಕೆಂದರೆ ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯಡಿಯಲ್ಲಿ ಸರಕುಗಳನ್ನು ಹೇಗೆ ವರ್ಗೀಕರಿಸಲಾಗುತ್ತದೆ ಎಂಬುದರ ಬಗ್ಗೆ ಸಂಕೀರ್ಣತೆ ಇದೆ ಎಂದು ಹೇಳಿದ್ದಾರೆ.