ಚಲಿಸುತ್ತಿದ್ದ ಬಸ್ ಗೆ ಬೆಂಕಿ: 9 ಮಂದಿ ಮೃತ್ಯು, 15 ಮಂದಿಗೆ ಗಾಯ
PC : NDTV
ಗುರುಗ್ರಾಮ: ಚಲಿಸುತ್ತಿದ್ದ ಬಸ್ ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಕನಿಷ್ಠ 9 ಮಂದಿ ಮೃತಪಟ್ಟು, 15 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ಮುಂಜಾನೆ ಹರ್ಯಾಣದ ನೂಹ್ ಜಿಲ್ಲೆಯ ತೌರು ಬಳಿ ನಡೆದಿದೆ.
ಈ ಘಟನೆಯು ಮುಂಜಾನೆ 2 ಗಂಟೆಗೆ ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ನಡೆದಿದೆ. ಬಸ್ ನಲ್ಲಿ ಸುಮಾರು 60 ಮಂದಿ ಪ್ರಯಾಣಿಸುತ್ತಿದ್ದರು. ಅವರೆಲ್ಲ ಪಂಜಾಬ್ ನ ಹೋಶಿಯಾರ್ ಪುರ್ ಹಾಗೂ ಲೂಧಿಯಾನಾದ ನಿವಾಸಿಗಳಾಗಿದ್ದು, ಮಥುರಾ ಹಾಗೂ ವೃಂದಾವನದಿಂದ ತೀರ್ಥಯಾತ್ರೆ ಮುಗಿಸಿಕೊಂಡು ತಮ್ಮ ತವರಿಗೆ ಮರಳುತ್ತಿದ್ದರು. ಅವರೆಲ್ಲರೂ ಸಂಬಂಧಿಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಾದರ್ ತೌರು ಠಾಣಾಧಿಕಾರಿ ಇನ್ಸ್ ಪೆಕ್ಟರ್ ಜಿತೇಂದ್ರ ಕುಮಾರ್, “ಈ ಅಪಘಾತದಲ್ಲಿ ಆರು ಮಂದಿ ಮಹಿಳೆಯರು ಹಾಗೂ ಮೂವರು ಪುರುಷರು ಸೇರಿದಂತೆ ಒಟ್ಟು ಒಂಬತ್ತು ಮಂದಿ ಮೃತಪಟ್ಟಿದ್ದಾರೆ. 15 ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲ ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
“ಘಟನೆಯ ಕಾರಣ ಇನ್ನಷ್ಟೆ ತಿಳಿದು ಬರಬೇಕಿದ್ದು, ತನಿಖೆಯು ಪ್ರಗತಿಯಲ್ಲಿದೆ” ಎಂದು ಅವರು ಹೇಳಿದ್ದಾರೆ.
ಬಸ್ ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದ ಕೆಲವು ಸ್ಥಳೀಯರು ಬಸ್ ಅನ್ನು ಹಿಂಬಾಲಿಸಿ, ಬಸ್ ಅನ್ನು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ. ನಂತರ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ಇಲಾಖೆಗೂ ಮಾಹಿತಿ ನೀಡಿದ್ದಾರೆ.