13 ವರ್ಷ ಹಿಂದಿನ ಆದೇಶ ಪಾಲಿಸದ ಆರೋಪ: ಉಪವಿಭಾಗಾಧಿಕಾರಿ ಕಚೇರಿಯ ಜಪ್ತಿಗೆ ನ್ಯಾಯಾಲಯ ಆದೇಶ!
ಸಾಂದರ್ಭಿಕ ಚಿತ್ರ
ಭೋಪಾಲ್: ಮಧ್ಯಪ್ರದೇಶ ರಸ್ತೆ ಅಭಿವೃದ್ಧಿ ನಿಗಮ ಸ್ವಾಧೀನಪಡಿಸಿಕೊಂಡ ಭೂಮಿಯ ಮಾಲೀಕರಿಗೆ ಪರಿಹಾರ ನೀಡಬೇಕು ಎನ್ನುವ 13 ವರ್ಷ ಹಿಂದಿನ ಆದೇಶವನ್ನು ಪಾಲಿಸದ ಆರೋಪದಲ್ಲಿ ಸಿರೋಂಜ್ ಉಪವಿಭಾಗಾಧಿಕಾರಿ ಕಚೇರಿಯ ಹರ್ಷಲ್ ಚೌಧರಿಯವರ ಕಚೇರಿಯ ಕುರ್ಚಿ, ಪೀಠೋಪಕರಣಗಳು ಮತ್ತು ಪ್ರಿಂಟರ್ ಜಪ್ತಿಗೆ ವಿದಿಷಾ ಜಿಲ್ಲಾ ವಿಚಾರಣಾ ನ್ಯಾಯಾಲಯ ಆದೇಶ ನೀಡಿದೆ.
ಪೊಲೀಸರು ಹಾಗೂ ಕೋರ್ಟ್ ಅಧಿಕಾರಿಗಳು ಏಪ್ರಿಲ್ 23ರಂದು ಕೋರ್ಟ್ ಆದೇಶವನ್ನು ಜಾರಿಗೊಳಿಸಿದರು. ಈ ಕಾರಣದಿಂದ ಉಪವಿಭಾಗಾಧಿಕಾರಿ ಕಚೇರಿ ಎರಡು ದಿನಗಳಿಂದ ಮುಚ್ಚಿದೆ. ಎಂಪಿಪಿಎಸ್ಸಿಯಲ್ಲಿ ಅಗ್ರಸ್ಥಾನಿಯಾಗಿರುವ ಚೌಧರಿಯವರು ಈ ಪ್ರಕರಣದಲ್ಲಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿರುವ ಸಂಬಂಧದ ಚರ್ಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವುದು ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ಸಾರ್ವಜನಿಕ ಹಣವನ್ನು ಉಳಿಸುವುದು ತಮ್ಮ ಉದ್ದೇಶ ಎಂದು ಅವರು ಪ್ರತಿಪಾದಿಸಿದ್ದು, "ನನ್ನನ್ನೂ ಜಪ್ತಿ ಮಾಡುವುದಾದರೂ ನಾನು ಇದಕ್ಕೆ ಸಿದ್ಧನಿದ್ದೇನೆ" ಎಂದು ಹೇಳಿದ್ದಾರೆ.
ಈ ಪೋಸ್ಟ್ ಅನ್ನು ನ್ಯಾಯಾಲಯ ನಿಂದನೆ ಎಂದು ಪರಿಗಣಿಸಿರುವ ಕೋರ್ಟ್, ಅವರಿಗೆ ನೋಟಿಸ್ ನೀಡಿ ಮೂರು ದಿನಗಳ ಒಳಗೆ ಉತ್ತರಿಸುವಂತೆ ಸೂಚಿಸಿದೆ. ಇವರ ಪೋಸ್ಟ್ ನ ಸ್ಕ್ರೀನ್ ಶಾಟ್ ಅನ್ನು ನ್ಯಾಯಾಲಯಕ್ಕೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
"ನನ್ನ ಉದ್ದೇಶ ಕೋರ್ಟ್ ಅನ್ನು ಧಿಕ್ಕರಿಸಬೇಕು ಎನ್ನುವುದಲ್ಲ. ಸಾಮಾಜಿಕ ಜಾಲತಾಣ ಗುಂಪುಗಳಲ್ಲಿ ಹರಿದಾಡುತ್ತಿದ್ದ ಕೆಲ ತಪ್ಪು ಸಂದೇಶಗಳಿಗೆ ನಾನು ಸ್ಪಷ್ಟನೆಯನ್ನಷ್ಟೇ ನೀಡಿದ್ದೇನೆ. ಬಳಿಕ ಅದನ್ನು ಡಿಲೀಟ್ ಮಾಡಿದ್ದೇನೆ" ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧದ ಮೇಳ್ಮನವಿ ಹೈಕೋರ್ಟ್ನಲ್ಲಿ ಬಾಕಿ ಇರುವ ಬಗ್ಗೆ ಜಿಲ್ಲಾ ನ್ಯಾಯಾಲಯಕ್ಕೆ ತಿಳಿಸಿದ್ದೇನೆ. ಈ ವಿಷಯದಲ್ಲಿ ಕಾನೂನು ಸಲಹೆ ಪಡೆಯಲಾಗುತ್ತಿದೆ ಎಂದು ವಿವರಿಸಿದ್ದಾರೆ.