ಬುಂದೇಲ್ಖಂಡದ 8 ಸಾವಿರ ಕೋಟಿ ರೂ. ಪ್ಯಾಕೇಜ್ನಲ್ಲಿ ಗೋಲ್ಮಾಲ್
ಮ.ಪ್ರ. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಕಮಲ್ನಾಥ್ ಆರೋಪ
Photo- PTI
ನಿವಾರಿ : ತಾನು ಕೇಂದ್ರ ಸಚಿವನಾಗಿದ್ದ ಸಮಯದಲ್ಲಿ,ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಮುಧ್ಯಪ್ರದೇಶದ ಬುಂದೇಲ್ಖಂಡಕ್ಕೆ 8 ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ನೀಡಿತ್ತು. ಆದರೆ ಆ ಅನುದಾನದಿಂದ ಜನತೆಯ ಕಲ್ಯಾಣಕ್ಕಾಗಿ ಒಂದೇ ಒಂದು ಪೈಸೆ ಕೂಡಾ ಖರ್ಚು ಮಾಡಲಿಲ್ಲ. ಬದಲಿಗೆ ಅದೊಂದು ದೊಡ್ಡ ಹಗರಣವಾಗಿ ಪರಿವರ್ತಿತವಾಯಿತು ಎಂದು ಮಧ್ಯಪ್ರದೇಶದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಮಲನಾಥ್ ಆಪಾದಿಸಿದ್ದಾರೆ.
ಮಧ್ಯಪ್ರದೇಶದ ಪೃಥ್ವಿಪುರದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಅವರು ಮಾತನಾಡುತ್ತಿದ್ದರು. ‘‘ನಾನು ಬುಂದೇಲ್ಖಂಡಕ್ಕೆ ಆಗಮಿಸಿದಾಗಲೆಲ್ಲಾ ನನಗೆ ಆಘಾತವುಂಟು ಮಾಡುವ ಒಂದು ವಿಷಯವೆಂದರೆ, ಕಾಂಗ್ರೆಸ್ ಸರಕಾರದಲ್ಲಿ ನಾನು ಕೇಂದ್ರ ಸಚಿವನಾಗಿದ್ದಾಗ ನಾವು ಬುಂದೇಲ್ಖಂಡಕ್ಕೆ 8 ಸಾವಿರ ಕೋಟಿ ರೂ. ಪ್ಯಾಕೇಜ್ ನೀಡಿದ್ದೆವು. ಆದರೆ ನಾವು ಪ್ಯಾಕೇಜ್ ಬದಲಿಗೆ ಹಣವನ್ನು ಕಳುಹಿಸಿದೆವು. ಆದರೆ ಅದು ಹಗರಣವಾಗಿ ಪರಿಣಮಿಸಿತು. ಈ ನಿಧಿಯಿಂದ ನಿಮ್ಮಲ್ಲಿ ಯಾರಾದರೂ ಪ್ರಯೋಜನ ಪಡೆದಿರುವಿರಾ ಎಂದು ನಿಮ್ಮಲ್ಲಿ ಕೇಳುತ್ತಿದ್ದೇನೆ. ಈ 8 ಸಾವಿರ ಕೋಟಿ ರೂ. ಏನಾಯಿತು ಎಂದು ಬಿಜೆಪಿ ಕಾರ್ಯಕರ್ತರನ್ನು ನೀವು ಕೇಳಬೇಕು ಎಂದು ಕಮಲ್ನಾಥ್ ಅವರು ರಾಜ್ಯದ ಜನತೆಗೆ ಕರೆ ನೀಡಿದರು.
ಈ 8 ಸಾವಿರ ಕೋಟಿ ರೂ.ಗಳನ್ನು ರೈತರಿಗೆ, ನೀರಾವರಿ, ಶಾಲೆಗಳು, ಆಸ್ಪತ್ರೆಗಳು ಹಾಗೂ ಯುವಜನರ ಉದ್ಯೋಗ ಸೃಷ್ಟಿಗಾಗಿ ಕಳುಹಿಸಿಕೊಡಲಾಗಿತ್ತು ಎಂದು ಕಮಲನಾಥ್ ತಿಳಿಸಿದರು.
‘‘ಇಂದು ರಾಜ್ಯದ ಪ್ರತಿಯೊಂದು ವಿಭಾಗವು ತೊಂದರೆಯಲ್ಲಿದೆ. ಯುವನಜತೆಯ ಭವಿಷ್ಯ ಅಂಧಕಾರದಲ್ಲಿದೆ. ಇಂದಿನ ಯುವಜನರಿಗೆ ಯಾವುದೇ ಗುತ್ತಿಗೆಗಳಾಗಲಿ, ಕಮೀಶನ್ಗಳಾಗಲಿ ಬೇಕಿಲ್ಲ. ಅವರಿಗೆ ಉದ್ಯೋಗ ಹಾಗೂ ಉದ್ಯಮ ಅವಕಾಶಗಳು ಬೇಕಾಗಿವೆ. ನಿರುದ್ಯೋಗದಲ್ಲಿ ಮಧ್ಯಪ್ರದೇಶವು ದೇಶದಲ್ಲೇ ನಂ.1 ಸ್ಥಾನದಲ್ಲಿದೆ ಎಂದು ಕಮಲನಾಥ್ ಹೇಳಿದರು.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಳೆದ 18 ವರ್ಷಗಳಲ್ಲಿ ರಾಜ್ಯಕ್ಕೇನು ತಂದುಕೊಟ್ಟಿದ್ದಾರೆ. ಅವರು ಹಣದುಬ್ಬರ, ನಿರುದ್ಯೋಗ,ಶಿಥಿಲಗೊಂಡ ಆರ್ಥಿಕತೆ ಹಾಗೂ ಮನೆಮನೆಗೆ ಮದ್ಯವನ್ನಷ್ಟೇ ನೀಡಿದ್ದಾರೆ ಎಂದು ಕಮಲ್ನಾಥ್ ಕಟಕಿಯಾಡಿದರು.