ಮಧ್ಯಪ್ರದೇಶ ಬಿಜೆಪಿ ಸರಕಾರದಲ್ಲಿ ಅಸಮಾಧಾನ ಸ್ಫೋಟ: ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಬೆದರಿಕೆ ಹಾಕಿದ ಸಚಿವ
ಭೋಪಾಲ್: ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರ ಮಾಡಿರುವ ರಾಮ್ ನಿವಾಸ್ ರಾವತ್ ಅವರಿಗೆ ತಮ್ಮ ಅರಣ್ಯ ಮತ್ತು ಪರಿಸರ ಖಾತೆಯನ್ನು ನೀಡಿದ್ದಕ್ಕೆ, ಮಧ್ಯಪ್ರದೇಶದ ಪರಿಶಿಷ್ಟ ಜಾತಿ ಕಲ್ಯಾಣ ಸಚಿವ ನಗರ್ ಸಿಂಗ್ ಚೌಹಾಣ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸುವ ಬೆದರಿಕೆ ಒಡ್ಡಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ನನ್ನ ಪತ್ನಿ ಅನಿತಾ ಸಿಂಗ್ ಚೌಹಾಣ್ ಕೂಡಾ ರತ್ಲಮ್ ಸಂಸದ ಸ್ಥಾನವನ್ನು ತ್ಯಜಿಸಲಿದ್ದಾರೆ ಎಂದೂ ಚೌಹಾಣ್ ಬೆದರಿಕೆ ಒಡ್ಡಿದ್ದಾರೆ.
ಈ ಕುರಿತು The Indian Express ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಚೌಹಾಣ್, "ಈ ವಿಷಯವನ್ನು ಚರ್ಚಿಸಲು ನಾನು ದಿಲ್ಲಿಗೆ ತೆರಳುತ್ತಿದ್ದೇನೆ. ಪಕ್ಷದ ಸಂಘಟನೆಯೊಂದಿಗೆ ಮಾತನಾಡಿದ ಒಂದೆರಡು ದಿನಗಳಲ್ಲಿ ನಾನು ಈ ಕುರಿತು ತೀರ್ಮಾನ ಕೈಗೊಳ್ಳಲಿದ್ದೇನೆ. ನಾನು ಹುದ್ದೆಯಲ್ಲಿ ಮುಂದಯವರಿಯಬಾರದು ಎಂದು ನನಗನ್ನಿಸುತ್ತಿದೆ. ನಾನು ನನ್ನ ಪತ್ನಿ ಅನಿತಾಳೊಂದಿಗೆ ರಾಜೀನಾಮೆ ಸಲ್ಲಿಸಲಿದ್ದೇನೆ. ನಾನು ಆಲಿಪುರ್‌ನ ಶಾಸಕನಾಗಿ ಜನರ ಸೇವೆಯನ್ನು ಮುಂದುವರಿಸುತ್ತೇನೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಕಾಂಗ್ರೆಸ್ ಶಾಸಕ ಹಾಗೂ ವಿಜಯಪುರ್ ವಿಧಾನಸಭಾ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿರುವ ರಾಮ್ ನಿವಾಸ್ ರಾವತ್, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಪ್ರಿಲ್ 30ರಂದು ಬಿಜೆಪಿ ಸೇರ್ಪಡೆಯಾಗಿದ್ದರು. ಇದರ ಬೆನ್ನಿಗೇ ಅವರು ಅರಣ್ಯ ಮತ್ತು ಪರಿಸರ ಖಾತೆ ಸಚಿವರಾಗಿರುವುದು ಪಕ್ಷದ ಒಂದು ವಲಯದ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.