ಮಧ್ಯಪ್ರದೇಶ | ಪತಿ ಮತ್ತು ಮಾವನ ಮೇಲೆ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ ಮಹಿಳೆ
ಗುಪ್ತಾಂಗಕ್ಕೆ ಕಾರದ ಪುಡಿ ತುರುಕಿದ ಆರೋಪ
ಸಾಂದರ್ಭಿಕ ಚಿತ್ರ | PC : freepik.com
ರಾಯಗಢ : ನನ್ನ ನೆರೆಮನೆಯಾತ, ಪತಿ ಹಾಗೂ ಮಾವ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ನನ್ನ ಗುಪ್ತಾಂಗಕ್ಕೆ ಕಾರದ ಪುಡಿ ತುರುಕಿದ್ದಾರೆ ಎಂದು ರಾಯಗಢ ಜಿಲ್ಲೆಯ ಆಶಾ ಕಾರ್ಯಕರ್ತೆಯೊಬ್ಬರು ನೀಡಿರುವ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ಡಿಸೆಂಬರ್ 13ರಂದು ಕರನ್ವಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನನ್ನ ಮಾವ, ನಾದಿನಿ ಹಾಗೂ ಅತ್ತೆ ನನಗೆ ಕಿರುಕುಳ ನೀಡಿ, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು 32 ವರ್ಷದ ಆಶಾ ಕಾರ್ಯಕರ್ತೆಯೊಬ್ಬರು ದೂರು ನೀಡಿದ್ದಾರೆ ಎಂದು ಬಯೋರಾ ಉಪ ವಿಭಾಗ ಪೊಲೀಸ್ ಅಧಿಕಾರಿ ನೇಹಾ ಗೌರ್ ತಿಳಿಸಿದ್ದಾರೆ.
ಆಕೆಯ ದೂರನ್ನು ಆಧರಿಸಿ, ಆಕೆಯ ಪೋಷಕರು ವಾಸಿಸುತ್ತಿರುವ ರುತಿಯಾಲ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಳ್ಳಲಾಗಿತ್ತು. ನಂತರ, ಈ ಪ್ರಕರಣವನ್ನು ಶುಕ್ರವಾರ ರಾಯಗಢ ಜಿಲ್ಲೆಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ದೂರುದಾರೆಯ ಪ್ರಕಾರ, 25 ವರ್ಷದ ನೆರೆಮನೆಯಾತ ನನ್ನ ಪೋಷಕರ ಮನೆಗೆ ಪ್ರವೇಶಿಸಿ, ನನಗೆ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದ. ಇದರ ಬೆನ್ನಿಗೇ ನನ್ನ ಕೋಣೆಗೆ ನನ್ನ ನಾದಿನಿ ಪ್ರವೇಶಿಸಿದಳು. ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದ ಆಕೆ, ನನ್ನ ಚಾರಿತ್ರ್ಯದ ಕುರಿತು ಪ್ರಶ್ನಿಸಿದಳು ಎಂದು ಆರೋಪಿಸಲಾಗಿದೆ.
ತಕ್ಷಣವೇ, ನನ್ನ ಪತಿಯ ಕುಟುಂಬದ ಇತರ ಸದಸ್ಯರೂ ನನ್ನನ್ನು ಸುತ್ತುವರಿದರು ಎಂದು ಆಕೆ ಆರೋಪಿಸಿದ್ದಾಳೆ.
ಸಂತ್ರಸ್ತ ಮಹಿಳೆಯ ಪ್ರಕಾರ, ಆಕೆಯ ಮೇಲೆ ಹಲ್ಲೆ ನಡೆಸಿರುವ ಆಕೆಯ ಮಾವ, ನಂತರ ಆಕೆಯ ಗುಪ್ತಾಂಗಕ್ಕೆ ಕಾರದ ಪುಡಿ ತುರುಕಿದ್ದಾನೆ. ಇದೇ ವೇಳೆ ಆಕೆಯ ಅತ್ತೆ ಬಿಸಿಯಾದ ಚಮಚದಿಂದ ಆಕೆಯ ದೇಹದ ಹಲವಾರು ಭಾಗಗಳ ಮೇಲೆ ಬರೆ ಎಳೆದಿದ್ದಾಳೆ ಎಂದು ಆರೋಪಿಸಲಾಗಿದೆ.
ದೂರುದಾರ ಮಹಿಳೆಯ ಪತಿ, ಆಕೆಯ ಮಾವ, ಅತ್ತೆ, ನಾದಿನಿ ಹಾಗೂ ನೆರೆಮನೆಯಾತನ ವಿರುದ್ಧ ಹಲ್ಲೆ, ಕಿರುಕುಳ ಹಾಗೂ ಅತ್ಯಾಚಾರದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕರನ್ವಾಸ್ ಪೊಲೀಸ್ ಠಾಣೆಯ ಠಾಣಾಧಿಕಾರಿ ರಮೇಶ್ ಜಾಟ್ ತಿಳಿಸಿದ್ದಾರೆ.
ಸದ್ಯ ಎಲ್ಲ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.