ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲು ಮುಹಮ್ಮದ್ ಶಮಿ ಸಜ್ಜು | ಮಧ್ಯಪ್ರದೇಶ ವಿರುದ್ಧ ರಣಜಿಗೆ ಬಂಗಾಳ ತಂಡದಲ್ಲಿ ಲಭ್ಯ
ಮುಹಮ್ಮದ್ ಶಮಿ | PTI
ಹೊಸದಿಲ್ಲಿ : ಸುಮಾರು ಒಂದು ವರ್ಷದ ನಂತರ ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಸ್ಪರ್ಧಾತ್ಮಕ ಕ್ರಿಕೆಟ್ ಗೆ ಮರಳಲು ಸಜ್ಜಾಗಿದ್ದಾರೆ. ಬುಧವಾರದಿಂದ ಆರಂಭವಾಗಲಿರುವ ಮಧ್ಯಪ್ರದೇಶ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಶಮಿ ಅವರು ಬಂಗಾಳ ತಂಡವನ್ನು ಪ್ರತಿಧಿಸಲಿದ್ದಾರೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯು(ಎನ್ಸಿಎ) ಶಮಿ ಅವರಿಗೆ ಆಡಲು ಅನುಮತಿ ನೀಡಿದೆ. ಶಮಿ ಅವರು ಸಕ್ರಿಯ ಕ್ರಿಕೆಟಿಗೆ ವಾಪಸಾಗಲಿದ್ದಾರೆ ಎಂದು ಕೆಲ ಸಮಯದಿಂದ ನಿರೀಕ್ಷಿಸಲಾಗುತ್ತಿತ್ತು. ರಣಜಿ ಟ್ರೋಫಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಗಾಯದ ಸಮಸ್ಯೆಯ ಕಾರಣಕ್ಕೆ ಎನ್ಸಿಎ ಫಿಟ್ನೆಸ್ ಪ್ರಮಾಣಪತ್ರ ನೀಡುವುದನ್ನು ವಿಳಂಬಗೊಳಿಸಿದ ಕಾರಣ ಶಮಿ ಅವರು ರಣಜಿಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.
ಮಧ್ಯಪ್ರದೇಶದ ವಿರುದ್ಧ ಬುಧವಾರ ಇಂದೋರ್ನಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ ಬಂಗಾಳದ ಪರ ಆಡುವ ಮೂಲಕ ವೇಗದ ಬೌಲರ್ ಮುಹಮ್ಮದ್ ಶಮಿ ಸ್ಪರ್ಧಾತ್ಮಕ ಕ್ರಿಕೆಟಿಗೆ ವಾಪಸಾಗಲಿದ್ದಾರೆ. ಇದು ಭಾರತೀಯ ಕ್ರಿಕೆಟ್ ಹಾಗೂ ಬಂಗಾಳ ರಣಜಿ ಟ್ರೋಫಿ ತಂಡಕ್ಕೆ ಹೆಚ್ಚಿನ ಶಕ್ತಿ ನೀಡಿದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ ಗೌರವ ಕಾರ್ಯದರ್ಶಿ ನರೇಶ್ ಓಜಾ ಹೇಳಿದ್ದಾರೆ.
ಕಳೆದ ವರ್ಷದ ನವೆಂಬರ್ನಲ್ಲಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಪರ ಆಡಿದ ನಂತರ ಶಮಿ ಅವರು ಸ್ಪರ್ಧಾತ್ಮಕ ಕ್ರಿಕೆಟ್ ನಿಂದ ದೂರ ಉಳಿದಿದ್ದರು. ಇದೀಗ ಮಧ್ಯಪ್ರದೇಶ ವಿರುದ್ಧ ಬಂಗಾಳದ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ.
ಬಂಗಾಳ ತಂಡಕ್ಕೆ ಶಮಿ ಸೇರ್ಪಡೆಯು ಕೇವಲ ಶಕ್ತಿ ತುಂಬಿದ್ದಲ್ಲದೆ, ಇಡೀ ತಂಡದ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ. ಬಂಗಾಳ 4 ರಣಜಿ ಪಂದ್ಯಗಳಲ್ಲಿ 8 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಕರ್ನಾಟಕ ವಿರುದ್ಧ ಹಿಂದಿನ ಪಂದ್ಯದಲ್ಲಿ ನಿರ್ಣಾಯಕ 3 ಅಂಕ ಗಳಿಸಿದೆ ಎಂದು ನರೇಶ್ ಓಜಾ ಹೇಳಿದ್ದಾರೆ.
ಶಮಿ ಅವರು ಕಳೆದ ವರ್ಷ ನವೆಂಬರ್ 19ರಂದು ನಡೆದಿದ್ದ ವಿಶ್ವಕಪ್ ಫೈನಲ್ ನಲ್ಲಿ ಕೊನೆಯ ಬಾರಿ ಆಡಿದ್ದರು. ಅ ನಂತರ ಗಾಯದ ಸಮಸ್ಯೆಗೆ ಒಳಗಾಗಿ ಅದರಿಂದ ಚೇತರಿಸಿಕೊಳ್ಳುತ್ತಿದ್ದರು.