ಉತ್ತರ ಪ್ರದೇಶ | ಮುಖ್ತಾರ್ ಅನ್ಸಾರಿ ಗ್ಯಾಂಗ್ ಶೂಟರ್ ಎನ್ಕೌಂಟರ್ನಲ್ಲಿ ಹತ್ಯೆ

ಅನುಜ್ ಕನೌಜಿಯಾ (Photo credit: english.jagran.com)
ಲಕ್ನೋ: ಜಮ್ಶೆಡ್ಪುರದಲ್ಲಿ ಮುಖ್ತಾರ್ ಅನ್ಸಾರಿ ಗ್ಯಾಂಗ್ನ ಶೂಟರ್ ಅನುಜ್ ಕನೌಜಿಯಾನನ್ನು ಎನ್ಕೌಂಟರ್ ಮಾಡಿರುವುದಾಗಿ ಅಧಿಕಾರಿಯೋರ್ವರು ತಿಳಿಸಿದರು.
ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ಮತ್ತು ಜಾರ್ಖಂಡ್ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅನುಜ್ ಕನೌಜಿಯಾನನ್ನು ಎನ್ಕೌಂಟರ್ ಮಾಡಿದರು. ಎನ್ಕೌಂಟರ್ ವೇಳೆ ಎಸ್ಟಿಎಫ್ ಉಪ ಪೊಲೀಸ್ ವರಿಷ್ಠಾಧಿಕಾರಿ ಡಿ ಕೆ ಶಾಹಿ ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶ ಎಸ್ಟಿಎಫ್ ಹೆಚ್ಚುವರಿ ಮಹಾನಿರ್ದೇಶಕ ಅಮಿತಾಬ್ ಯಶ್ ಈ ಕುರಿತು ಪ್ರತಿಕ್ರಿಯಿಸಿ, ಖಚಿತ ಮಾಹಿತಿ ಮೇರೆಗೆ ಎಸ್ಟಿಎಫ್ ಮತ್ತು ಜಾರ್ಖಂಡ್ ಪೊಲೀಸರು ಅನುಜ್ ಕನೌಜಿಯಾನನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ ಈ ವೇಳೆ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪೊಲೀಸರು ನಡೆಸಿದ ಪ್ರತಿ ದಾಳಿಗೆ ಅನುಜ್ ಕನೌಜಿಯಾ ಮೃತಪಟ್ಟಿದ್ದಾನೆ ಎಂದು ತಿಳಿಸಿದರು.
ಕನೌಜಿಯಾ ಕೊಲೆ, ಸುಲಿಗೆ, ಭೂಕಬಳಿಕೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಸೇರಿದಂತೆ 23 ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ. ಉತ್ತರ ಪ್ರದೇಶದ ಡಿಜಿಪಿ ಪ್ರಶಾಂತ್ ಕುಮಾರ್ ಇತ್ತೀಚೆಗೆ ಆತನ ಬಗ್ಗೆ ಮಾಹಿತಿ ನೀಡುವವರಿಗೆ 2.5 ಲಕ್ಷ ನಗದು ಬಹುಮಾನ ಘೋಷಿಸಿದ್ದರು.