ಮುಂಬೈ | ಆರು ಅಲ್ಪಸಂಖ್ಯಾತ ಪ್ರಾಬಲ್ಯದ ಕ್ಷೇತ್ರಗಳ ಕುರಿತು ಕಾಂಗ್ರೆಸ್-ಉದ್ಧವ್ ಬಣ ನಡುವೆ ಹಗ್ಗ ಜಗ್ಗಾಟ
PC : indiatoday.in
ಮುಂಬೈ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಥಾನಗಳ ಕುರಿತು ಮಹಾ ವಿಕಾಸ ಅಘಾಡಿ (ಎಂವಿಎ)ಯಲ್ಲಿ ಹಗ್ಗ ಜಗ್ಗಾಟ ಗುರುವಾರ ತೀವ್ರಗೊಂಡಿದ್ದು,ಮುಂಬೈನ ಆರು ಅಲ್ಪಸಂಖ್ಯಾತ ಪ್ರಾಬಲ್ಯದ ಕ್ಷೇತ್ರಗಳಿಗಾಗಿ ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ತಮ್ಮ ಹಕ್ಕುಗಳನ್ನು ಮಂಡಿಸಿವೆ.
ಮೂರು ಗಂಟೆಗಳ ಕಾಲ ನಡೆದ ಮೈತ್ರಿಕೂಟದ ಸಭೆಯಲ್ಲಿ ಬೈಕುಲಾ, ಕುರ್ಲಾ, ಘಾಟ್ಕೋಪರ್ ಪಶ್ಚಿಮ, ವರ್ಸೋವಾ, ಜೋಗೇಶ್ವರಿ ಪೂರ್ವ ಮತ್ತು ಮಾಹಿಮ್ ಕೇತ್ರಗಳ ಕುರಿತು ಕಾಂಗ್ರೆಸ್-ಸೇನೆ (ಯುಬಿಟಿ) ನಡುವಿನ ಬಿಕ್ಕಟ್ಟು ಹಾಗೆಯೇ ಉಳಿದುಕೊಂಡಿದೆ. ಪ್ರತ್ಯೇಕವಾಗಿ ಎನ್ಸಿಪಿ (ಎಸ್ಪಿ) ಕೂಡ ಕುರ್ಲಾ, ವರ್ಸೋವಾ ಮತ್ತು ಘಾಟ್ಕೋಪರ್ ಪಶ್ಚಿಮ ಕ್ಷೇತ್ರಗಳಿಗಾಗಿ ಬೇಡಿಕೆಯನ್ನು ಮಂಡಿಸಿದೆ.
ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ ತನ್ನ ಉತ್ತಮ ಸಾಧನೆಯ ಬಳಿಕ ಕಾಂಗ್ರೆಸ್ ಮುಂಬೈನಲ್ಲಿ ಹೆಚ್ಚು ಸ್ಥಾನಗಳ ಮೆಲೆ ಕಣ್ಣಿಟ್ಟಿದೆ. ಮಹಾರಾಷ್ಟ್ರ ಲೋಕಸಭಾ ಚುನಾವಣೆಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆದ್ದಿದ್ದ 30 ಸ್ಥಾನಗಳಲ್ಲಿ 13 ಕಾಂಗ್ರೆಸ್ ಪಾಲಾಗಿದ್ದವು.
ಕ್ರಮೇಣ ಉದ್ಧವ ಸೇನೆಯತ್ತ ವಾಲುತ್ತಿರುವ ಮುಂಬೈನ ಅಲ್ಪಸಂಖ್ಯಾತ ಪ್ರಾಬಲ್ಯದ ಕೇತ್ರಗಳನ್ನು ತನ್ನ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಆಗಿ ಮರಳಿ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ.
ಮುಂಬೈನಲ್ಲಿ 36 ವಿಧಾನಸಭಾ ಕ್ಷೇತ್ರಗಳಿದ್ದು,ಶಿವಸೇನೆ (ಯುಬಿಟಿ) 20, ಕಾಂಗ್ರೆಸ್ 18 ಮತ್ತು ಎನ್ಸಿಪಿ (ಎಸ್ಪಿ) ಏಳು ಸ್ಥಾನಗಳನ್ನು ಕೋರಿವೆ.