ಮುಂಬೈ | ವಿಮಾನ ಢಿಕ್ಕಿ ಹೊಡೆದು ಕನಿಷ್ಠ 40 ರಾಜಹಂಸಗಳು ಸಾವು
PC: NDTV
ಮುಂಬೈ : ಮಹಾರಾಷ್ಟ್ರದ ಮುಂಬೈಯ ಘಾಟ್ಖೋಪರ್ ಪ್ರದೇಶದಲ್ಲಿ ಎಮಿರೇಟ್ಸ್ ವಿಮಾನಕ್ಕೆ ಸಿಲುಕಿ ಕನಿಷ್ಠ 40 ರಾಜ ಹಂಸಗಳು ಸಾವನ್ನಪ್ಪಿವೆ.
ಮುಂಬೈಯ ಘಾಟ್ಖೋಪರ್ ಪ್ರದೇಶದಲ್ಲಿ ಹಲವು ಸ್ಥಳಗಳಲ್ಲಿ 40 ರಾಜಹಂಸಗಳ ಕಳೇಬರಗಳು ಪತ್ತೆಯಾಗಿವೆ. ಮುಂಬೈಯ ಎಮಿರೇಟ್ಸ್ ವಿಮಾನ ಢಿಕ್ಕಿಯಾಗಿರುವುದರಿಂದ ಈ ರಾಜಹಂಸಗಳು ಸಾವನ್ನಪ್ಪಿವೆ ಎಂಬುದು ದೃಢಪಟ್ಟಿದೆ ಎಂದು ಬೃಹನ್ಮುಂಬಯಿ ಮಹಾ ನಗರ ಪಾಲಿಕೆ (ಬಿಎಂಸಿ) ಮಂಗಳವಾರ ತಿಳಿಸಿದೆ.
ಘಾಟ್ಖೋಪರ್ನ ವಿವಿಧ ಸ್ಥಳಗಳಲ್ಲಿ ರಾಜಹಂಸಗಳ ಕಳೇಬರಗಳು ಪತ್ತೆಯಾದ ಬಗ್ಗೆ ಮಂಗಳವಾರ ಜನರಿಂದ ಹಲವು ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ರೆಸ್ಕಿಂಕ್ ಅಸೋಸಿಯೇಶನ್ ಫಾರ್ ವೈಲ್ಡ್ಲೈಫ್ ವೆಲ್ಫೇರ್ (ಆರ್ಎಡಬ್ಲುಡಬ್ಲ್ಯು) ಸಂಸ್ಥಾಪಕ ಹಾಗೂ ಅರಣ್ಯ ಇಲಾಖೆಯ ಗೌರವ ವನ್ಯಜೀವಿ ವಾರ್ಡನ್ ಪವನ್ ಶರ್ಮಾ ಹೇಳಿದ್ದಾರೆ.
ಅರಣ್ಯ ಇಲಾಖೆಯ ಮ್ಯಾಂಗ್ರೂವ್ ಘಟಕ ಹಾಗೂ ಆರ್ಎಡಬ್ಲುಡಬ್ಲ್ಯು ತಂಡ ಸೋಮವಾರ ರಾತ್ರಿ ಘಾಟ್ಖೋಪರ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಹಾಗೂ ಹಲವು ರಾಜಹಂಸಗಳ ಕಳೇಬರಗಳನ್ನು ಪತ್ತೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ದುಬೈ-ಮುಂಬೈ ನಡುವೆ ಸಂಚರಿಸುವ ಎಮಿರೇಟ್ಸ್ ವಿಮಾನ ಇ.ಕೆ. 508 ಸೋಮವಾರ ರಾತ್ರಿ 9.18ಕ್ಕೆ ಆಗಮಿಸುತ್ತಿರುವ ಸಂದರ್ಭ ರಾಜಹಂಸಗಳ ಹಿಂಡಿಗೆ ಢಿಕ್ಕಿಯಾಗಿದೆ ಎಂದು ಮುಂಬೈ ವಿಮಾನ ನಿಲ್ದಾಣದ ಮೂಲಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.