ಮುಂಬೈ ಜಾಹೀರಾತು ಫಲಕ ಕುಸಿತ ಪ್ರಕರಣ: ಮುಂಬೈ ಪೊಲೀಸರ ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಪ್ರಮುಖ ಆರೋಪಿ
ಭವೇಶ್ ಭಿಂಡೆ | PC : NDTV
ಹೊಸದಿಲ್ಲಿ: ಮುಂಬೈನ ಹೃದಯ ಭಾಗದಲ್ಲಿ ನಡೆದಿದ್ದ ಜಾಹೀರಾತು ಫಲಕ ಕುಸಿದು 16 ಮಂದಿ ಮೃತಪಟ್ಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಜಾಹೀರಾತು ಫಲಕವನ್ನು ಸ್ಥಾಪಿಸಿದ್ದ ಇಗೋ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಮಾಲಕ ಭವೇಶ್ ಭಿಂಡೆಯನ್ನು ತಮ್ಮ ರಹಸ್ಯ ಕಾರ್ಯಾಚರಣೆಯಲ್ಲಿ ಉದಯ್ ಪುರ್ ನಿಂದ ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ. ಆತ ಘಟನೆ ನಡೆದ ನಂತರ, ಮೂರು ದಿನಗಳಿಂದ ತಲೆ ಮರೆಸಿಕೊಂಡಿದ್ದ.
ಮೂರು ರಾಜ್ಯಗಳಲ್ಲಿ ವ್ಯಾಪಕ ಶೋಧ ಕಾರ್ಯ ಕೈಗೊಂಡ ನಂತರ ಆತನನ್ನು ಬಂಧಿಸಲಾಗಿದೆ.
120 ಚದರ ಅಡಿಯ ಬೃಹತ್ ಜಾಹೀರಾತು ಫಲಕವು ಕುಸಿತಗೊಂಡಿದ್ದರಿಂದ 16 ಮಂದಿ ಮೃತಪಟ್ಟು, 75 ಮಂದಿ ಗಾಯಗೊಂಡಿದ್ದರು.
ಪೊಲೀಸರು ತನ್ನ ಬೆನ್ನು ಹತ್ತಿದ್ದಾರೆ ಎಂಬ ಸುಳಿವು ದೊರೆಯುತ್ತಿದ್ದಂತೆಯೆ ಮುಂಬೈನಿಂದ ಪರಾರಿಯಾಗಿದ್ದ ಭವೇಶ್ ಭಿಂಡೆ, ಹಲವಾರು ನಗರಗಳಲ್ಲಿ ತಲೆ ಮರೆಸಿಕೊಂಡಿದ್ದ. ತನ್ನ ಬಂಧನವನ್ನು ತಪ್ಪಿಸಿಕೊಳ್ಳಲು ಆತ ತನ್ನ ಸ್ಥಳವನ್ನು ಪದೇ ಪದೇ ಬದಲಾಯಿಸುತ್ತಿದ್ದ ಹಾಗೂ ನಕಲಿ ಗುರುತನ್ನು ಹೇಳಿಕೊಂಡಿದ್ದ.
ಆತನ ಪರಾರಿಯಿಂದ ಪೊಲೀಸರು ಲೋನಾವಾಲಾ, ಥಾಣೆ ಹಾಗೂ ಅಹಮದಾಬಾದ್ ನಗರಗಳೆಲ್ಲ ಶೋಧ ಕಾರ್ಯ ನಡೆಸಿ, ಕೊನೆಗೆ ಉದಯ್ ಪುರ್ ಹೋಟೆಲೊಂದರಲ್ಲಿ ನಕಲಿ ಹೆಸರಿನಲ್ಲಿ ಅವಿತುಕೊಂಡಿದ್ದ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ತನ್ನನ್ನು ಸಮೀಪಿಸಿದಾಗಲೆಲ್ಲ ಆತ ಹೊಸ ನಗರಕ್ಕೆ ಪರಾರಿಯಾಗುತ್ತಿದ್ದ. ಹೀಗಾಗಿ ಆತನ ಪತ್ತೆಗಾಗಿ ನಿಯೋಜನೆಗೊಂಡಿದ್ದ ಎಂಟು ತಂಡಗಳು ಹಗಲಿರುಳೂ ಕಾರ್ಯಾಚರಣೆ ನಡೆಸಿ, ಆತನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿವೆ.
ಪೊಲೀಸರು ತನ್ನ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅರಿತ ಭವೇಶ್ ಭಿಂಡೆ, ಮುಂಬೈಗೆ ಮರಳುವುದಕ್ಕೂ ಹಿಂದಿನ ದಿನ ಲೋನಾವಾಲಾಗೆ ಪರಾರಿಯಾಗಿದ್ದ. ಇದರ ಬೆನ್ನಿಗೇ ಆತ ಥಾಣೆಗೆ ಪ್ರಯಾಣಿಸಿದ್ದ. ಬಳಿಕ ಅಹಮದಾಬಾದ್ ಗೆ ತೆರಳಿದ್ದ ಆತ, ನಂತರ ನಂತರ ಉದಯ್ ಪುರದಲ್ಲಿ ಆಶ್ರಯ ಪಡೆದಿದ್ದಾಗ ಮುಂಬೈ ಅಪರಾಧ ದಳದ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ.
ಉದಯ್ ಪುರ್ ಕಾರ್ಯಾಚರಣೆಯು ಎಷ್ಟು ರಹಸ್ಯವಾಗಿತ್ತೆಂದರೆ, ಭಿಂಡೆಯನ್ನು ಸೆರೆ ಹಿಡಿಯಲು ಮುಂಬೈ ಪೊಲೀಸರ ತಂಡವು ಉದಯ್ ಪುರ್ ನಲ್ಲಿದೆ ಎಂಬ ಮಾಹಿತಿಯನ್ನು ಸ್ಥಳೀಯ ಪೊಲೀಸರಿಗೂ ನೀಡಲಾಗಿರಲಿಲ್ಲ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ತನಿಖಾ ತಂಡದ ಅಧಿಕಾರಿಯೊಬ್ಬರು, “ಕಾರ್ಯಾಚರಣೆಯು ಭಾರಿ ರಹಸ್ಯವಾಗಿತ್ತು ಹಾಗೂ ಈ ಕುರಿತು ಉದಯ್ ಪುರ್ ಪೊಲೀಸರಿಗೂ ತಿಳಿದಿರಲಿಲ್ಲ” ಎಂದು ಹೇಳಿದ್ದಾರೆ.
ಮುಂಬೈಗೆ ಅಪ್ಪಳಿಸಿದ ತೀವ್ರ ಸ್ವರೂಪದ ದೂಳಿನ ಬಿರುಗಾಳಿ ಹಾಗೂ ಅಕಾಲಿಕ ಮಳೆಯಿಂದಾಗಿ ಘಟ್ಕೋಪಾರ್ ನಲ್ಲಿನ ಛೆಡ್ಡಾನಗರ್ ಪ್ರದೇಶದಲ್ಲಿನ ಪೆಟ್ರೋಲ್ ಪಂಪ್ ಬಳಿಯಿದ್ದ ಜಾಹೀರಾತು ಫಲಕವೊಂದು ಉರುಳಿ ಬಿದ್ದಿದ್ದರಿಂದ 16 ಮಂದಿ ಮೃತಪಟ್ಟು, 75 ಮಂದಿ ಗಾಯಗೊಂಡಿದ್ದರು.