ಮುಂಬೈ ಸ್ಫೋಟ ಪ್ರಕರಣ: ತಹವ್ವುರ್ ರಾಣಾ ಗಡೀಪಾರು ಸನ್ನಿಹಿತ?
PC: x.com/cozyduke_apt29
ವಾಷಿಂಗ್ಟನ್: 2008ರ ಮುಂಬೈ ದಾಳಿ ಪ್ರಕರಣ ಶಂಕಿತ ಆರೋಪಿ ತಹವ್ವುರ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡುವಂತೆ ಭಾರತದ ಮನವಿಗೆ ಅಮೆರಿಕ ಸಕಾರಾತ್ಮಕವಾಗಿ ಸ್ಪಂದಿಸಿದೆ. ಗಡೀಪಾರು ಮಾಡುವಂತೆ ಭಾರತ ಸಲ್ಲಿಸಿದ ಮನವಿಯನ್ನು ಅಮೆರಿಕ ಸುಪ್ರೀಂಕೋರ್ಟ್ ನಲ್ಲಿ ಬೆಂಬಲಿಸಿರುವ ಅಲ್ಲಿನ ಸರ್ಕಾರ ತಹವ್ವುರ್ ರಾಣಾ ಸಲ್ಲಿಸಿದ್ದ "ದ ಪಿಟಿಷನ್ ಫಾರ್ ಎ ರಿಟ್ ಆಫ್ ಸೆಟ್ರೊರರಿ"ಯನ್ನು ತಿರಸ್ಕರಿಸುವಂತೆ ಕೋರಿದೆ.
ಪಾಕಿಸ್ತಾನ ಮೂಲದ ಕೆನಡಾ ಪ್ರಜೆಯಾಗಿರುವ ರಾಣಾ, ಇತ್ತೀಚೆಗೆ ಸುಪ್ರೀಂಕೋರ್ಟ್ ನಲ್ಲಿ ಮನವಿ ಸಲ್ಲಿಸಿ ಗಡೀಪಾರು ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿದ್ದ. ಅಮೆರಿಕದ ಸಾಲಿಸಿಟರ್ ಜನರಲ್, ಎಲಿಜಬೆತ್ ಬಿ. ಪ್ರೆಲೊಗಾರ್ ಡಿಸೆಂಬರ್ 16ರಂದು ಪ್ರತಿಕ್ರಿಯೆ ಸಲ್ಲಿಸಿ, ರಾಣಾ ಅರ್ಜಿಯನ್ನು ತಿರಸ್ಕರಿಸುವಂತೆ ಆಗ್ರಹಿಸಿದ್ದಾರೆ.
ರಾಣಾ ಈ ಮೊದಲು ಗಡೀಪಾರು ಪ್ರಕ್ರಿಯೆಯನ್ನು ಕೆಳಹಂತದ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು ಹಾಗೂ ಇದನ್ನು ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಯುಎಸ್ ಕೋರ್ಟ್ ಆಫ್ ಅಪೀಲ್ಸ್ ಫಾರ್ ನೈಂತ್ ಸರ್ಕ್ಯೂಟ್ ವಜಾ ಮಾಡಿತ್ತು. ಭಾರತ ಮತ್ತು ಅಮೆರಿಕ ನಡುವಿನ ಗಡೀಪಾರು ಒಪ್ಪಂದವು ರಾಣಾ ಗಡೀಪಾರನ್ನು ಅನುಮತಿಸುತ್ತದೆ ಎಂದು ಕೊರ್ಟ್ ಹೇಳಿತ್ತು.
ಬಳಿಕ ರಾಣಾ ಸುಪ್ರೀಂಕೋರ್ಟ್ ನಲ್ಲಿ ನವೆಂಬರ್ 13ರಂದು ಮೇಲ್ಮನವಿ ಸಲ್ಲಿಸಿದ್ದ. ಈ ಅರ್ಜಿಯು ಗಡೀಪಾರಿನಿಂದ ತಪ್ಪಿಸಿಕೊಳ್ಳಲು ಇರುವ ಕೊನೆಯ ಕಾನೂನಾತ್ಮಕ ಪ್ರಯತ್ನವಾಗಿದೆ.