ಪ್ರಯೋಗಾರ್ಥ ಎಂಜಿನ್ ಚಾಲನೆಯ ವೇಳೆ ನೌಕಾ ಪಡೆಯ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ದೋಣಿಗೆ ಡಿಕ್ಕಿ : ಪೊಲೀಸರು
PC : PTI
ಮುಂಬೈ : ಪ್ರಯೋಗಾರ್ಥ ಎಂಜಿನ್ ಚಾಲನೆ ವೇಳೆ ನೌಕಾಪಡೆಯ ಚಾಲಕನ ನೌಕೆಯ ಮೇಲೆ ನಿಯಂತ್ರಣ ಕಳೆದುಕೊಂಡಿದ್ದರಿಂದ, ಮುಂಬೈ ಕರಾವಳಿಯ ಬಳಿ ದೋಣಿಗೆ ಡಿಕ್ಕಿ ಹೊಡೆದು ಸಮುದ್ರದ ಮಧ್ಯೆ ಅಪಘಾತ ಸಂಭವಿಸಿತು ಎಂದು ಅಪಘಾತದಲ್ಲಿ ಗಾಯಗೊಂಡಿರುವ ನೌಕಾಪಡೆ ಸಿಬ್ಬಂದಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಶುಕ್ರವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನ ಗೇಟ್ ವೇ ಆಫ್ ಇಂಡಿಯಾದಿಂದ ಪ್ರಸಿದ್ಧ ಪ್ರವಾಸಿ ತಾಣವಾದ ಎಲಿಫಾಂಟ ದ್ವೀಪಕ್ಕೆ ತೆರಳುತ್ತಿದ್ದ ‘ನೀಲ್ ಕಮಲ್’ ದೋಣಿಯೊಂದಿಗೆ ನೌಕಾಪಡೆಯ ನೌಕೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಗಾಯಗೊಂಡಿದ್ದ ನೌಕಾಪಡೆಯ ಸಿಬ್ಬಂದಿಯೊಬ್ಬರ ಹೇಳಿಕೆಯನ್ನು ಅಪಘಾತದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ದಾಖಲಿಸಿಕೊಂಡರು.
100ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಅರಬ್ಬೀ ಸಮುದ್ರದಲ್ಲಿ ಮುಳುಗಲು ಕಾರಣವಾದ ಅಪಘಾತದಲ್ಲಿ ನೌಕಾಪಡೆಯ ನೌಕೆಯಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ನೌಕಾಪಡೆಯ ಸಿಬ್ಬಂದಿಗಳು ಸೇರಿದಂತೆ ಒಟ್ಟು 14 ಮಂದಿ ಮೃತಪಟ್ಟಿದ್ದರು.
ಈ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೌಕಾಪಡೆಯ ಸಿಬ್ಬಂದಿ ಕರ್ಮವೀರ್ ಯಾದವ್ ಅವರ ಹೇಳಿಕೆಯನ್ನು ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಕೊಲಾಬಾ ಪೊಲೀಸ್ ಠಾಣೆಯ ಪೊಲೀಸರ ತಂಡ ದಾಖಲಿಸಿಕೊಂಡಿತು ಎಂದು ಹೇಳಲಾಗಿದೆ.
ಯಾದವ್ ಪ್ರಕಾರ, ಪ್ರಯೋಗಾರ್ಥ ಎಂಜಿನ್ ಚಾಲನೆ ನಡೆಸುತ್ತಿದ್ದ ನೌಕಾಪಡೆಯ ನೌಕೆಯ ಮೇಲೆ ಚಾಲಕನು ನಿಯಂತ್ರಣ ಕಳೆದುಕೊಂಡಿದ್ದರಿಂದ, ನೌಕೆಯು ಪ್ರಯಾಣಿಕರಿಂದ ಕಿಕ್ಕಿರಿದ್ದ ದೋಣಿಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಪೊಲೀಸರು ನೌಕೆಯ ಪರೀಕ್ಷೆಯನ್ನೂ ನಡೆಸಿದರು ಎಂದು ವರದಿಯಾಗಿದೆ.
ಈ ಅಪಘಾತದ ಕುರಿತು ತನಿಖೆ ನಡೆಸಲು ನೌಕಾಪಡೆ ಪ್ರತ್ಯೇಕ ತನಿಖಾ ಮಂಡಳಿಯನ್ನು ರಚಿಸಿದೆ.