ಮುಂಬೈ ತಂಡದ ನಾಯಕತ್ವ ರೋಹಿತ್ ಶರ್ಮಾಗೆ ಮರಳಿ ನೀಡಬಹುದು: ಮನೋಜ್ ತಿವಾರಿ
ಹಾರ್ದಿಕ್ ರನ್ನು ನಾಯಕನ ಸ್ಥಾನದಿಂದ ಬದಲಿಸುವುದು ಅವಸರದ ಹೆಜ್ಜೆ: ಸೆಹ್ವಾಗ್
ರೋಹಿತ್ ಶರ್ಮಾ | Photo: PTI
ಮುಂಬೈ : ಈ ವರ್ಷದ ಐಪಿಎಲ್ ನ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾಗೆ ಮರಳಿ ನೀಡಬಹುದು ಎಂದು ಭಾರತದ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಆಟಗಾರ ಮನೋಜ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.
ನೂತನ ನಾಯಕ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಸತತ 3 ಪಂದ್ಯಗಳಲ್ಲಿ ಸೋತಿದೆ. ಇದೀಗ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಟೂರ್ನಿ ಆರಂಭಕ್ಕೆ ಮೊದಲು ರೋಹಿತ್ ಬದಲಿಗೆ ಹಾರ್ದಿಕ್ ರನ್ನು ಮುಂಬೈ ತಂಡದ ನಾಯಕರನ್ನಾಗಿ ನೇಮಿಸಿದ್ದಕ್ಕೆ ಅಭಿಮಾನಿಗಳು ಹಾಗೂ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದರು.
ಮುಂಬೈ ತಂಡ ಎಪ್ರಿಲ್ 7ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಈ ಅಂತರದಲ್ಲಿ ನಾಯಕತ್ವ ಬದಲಾಗಬಹುದು ಎಂದು ತಿವಾರಿ ಹೇಳಿದ್ದಾರೆ.
ಹಾರ್ದಿಕ್ ಒತ್ತಡದಲ್ಲಿ ಸಿಲುಕಿದ್ದಾರೆ. ಮುಂಬೈ ತಂಡವು ನಾಯಕತ್ವವನ್ನು ರೋಹಿತ್ ಗೆ ಹಸ್ತಾಂತರಿಸುವ ಸಾಧ್ಯತೆಯಿದೆ. ಫ್ರಾಂಚೈಸಿ ಹಾಗೂ ಮಾಲಿಕರನ್ನು ನಾನು ಅರ್ಥ ಮಾಡಿಕೊಂಡಿರುವ ಪ್ರಕಾರ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂಜರಿಯವುದಿಲ್ಲ. ಐದು ಬಾರಿಯ ಚಾಂಪಿಯನ್ ತಂಡದ ನಾಯಕನನ್ನು ಬದಲಿಸಿರುವುದು ಪ್ರಮುಖ ನಿರ್ಧಾರವಾಗಿತ್ತು ಎಂದು ತಿವಾರಿ ಹೇಳಿದರು.
ಒಮ್ಮೆ ರೋಹಿತ್ ಅವರ ನಾಯಕತ್ವದಲ್ಲಿ ಸತತ ಐದು ಪಂದ್ಯಗಳನ್ನು ಸೋತ ನಂತರ ಮುಂಬೈ ತಂಡ ಆ ವರ್ಷ ಟೂರ್ನಮೆಂಟನ್ನು ಗೆದ್ದಿದೆ. ಹೀಗಾಗಿ ನಾವು ತಾಳ್ಮೆ ಪ್ರದರ್ಶಿಸಬೇಕು. ಹಾರ್ದಿಕ್ ರನ್ನು ನಾಯಕತ್ವದಿಂದ ಕಿತ್ತು ಹಾಕಲಾಗುತ್ತದೆ ಎಂದು ಹೇಳುವುದು ಅವಸರ ಎನಿಸುತ್ತದೆ. ಇಂತಹ ಭವಿಷ್ಯ ಹೇಳುವ ಮೊದಲು ನಾವು ಇನ್ನು ಎರಡು ಪಂದ್ಯಗಳನ್ನು ಕಾಯುವ ಅಗತ್ಯವಿದೆ ಎಂದು ಭಾರತದ ಬ್ಯಾಟಿಂಗ್ ದಂತಕತೆ ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯಿಸಿದ್ದಾರೆ.