ಟಿಆರ್‌ಪಿ ಹಗರಣ | ಅರ್ನಾಬ್ ಗೋಸ್ವಾಮಿ ಮತ್ತು ಇತರರ ವಿರುದ್ಧದ ಪ್ರಕರಣ ಹಿಂಪಡೆಯಲು ಪೊಲೀಸರಿಗೆ ಅನುಮತಿ ನೀಡಿದ ಮುಂಬೈ ನ್ಯಾಯಾಲಯ
ಮುಂಬೈ : ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಆರೋಪಿಯಾಗಿರುವ 2020 ರ ಸುಳ್ಳು ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ)ಗಳ ಹಗರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ಹಿಂಪಡೆಯಲು ಮುಂಬೈ ನ್ಯಾಯಾಲಯವು ಮುಂಬೈ ಪೊಲೀಸ್ ಕ್ರೈ ಬ್ರಾಂಚ್ ಗೆ ಬುಧವಾರ ಅನುಮತಿ ನೀಡಿದೆ ಎಂದು barandbench.com ವರದಿ ಮಾಡಿದೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶಿಶಿರ್ ಹಿರಾಯ್ ಅವರು ವಿಚಾರಣೆಯನ್ನು ಮುಂದುವರಿಸುವುದರಿಂದ ಆರೋಪಿಗಳಿಗೆ ಶಿಕ್ಷೆಯಾಗುವುದಿಲ್ಲ, ಬದಲಿಗೆ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತದೆ ಎಂದು ತಿಳಿಸಿದ ನಂತರ ನ್ಯಾಯಾಲಯವು ಪ್ರಕರಣವನ್ನು ಹಿಂಪಡೆಯಲು ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.
ಎಸ್‌ಪ್ಲನೇಡ್ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಲ್‌ಎಸ್ ಪಧೇನ್ ಅವರು ಪ್ರಕರಣ ಹಿಂಪಡೆಯಲು ಪೊಲೀಸರಿಗೆ ಅನುಮತಿ ನೀಡಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹಿರಾಯ್ ದೃಢಪಡಿಸಿದ್ದಾರೆ.
ಮುಂಬೈ ಪೊಲೀಸರ ಎಫ್‌ಐಆರ್ ಆಧರಿಸಿ, ಜಾರಿ ನಿರ್ದೇಶನಾಲಯವು(ಈಡಿ) ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು. ತನ್ನ ತನಿಖಾ ವರದಿಯಲ್ಲಿ, ಪ್ರಕರಣದಲ್ಲಿ ಟಿಆರ್‌ಪಿ ಸಂಖ್ಯೆಗಳನ್ನು ದುರ್ಬಳಕೆ ಮಾಡಿದ ಆರೋಪದಿಂದ ರಿಪಬ್ಲಿಕ್ ಟಿವಿ ಮತ್ತು ರಿಪಬ್ಲಿಕ್ ಭಾರತ್ ಅನ್ನು ಜಾರಿ ನಿರ್ದೇಶನಾಲಯವು ಈಗಾಗಲೇ ತೆರವುಗೊಳಿಸಿದೆ.
2020 ರಲ್ಲಿ ಹಂಸಾ ರಿಸರ್ಚ್ ಗ್ರೂಪ್‌ನ ಕೆಲವು ಉದ್ಯೋಗಿಗಳು ನಿರ್ದಿಷ್ಟ ಟಿವಿ ಚಾನೆಲ್‌ಗಳನ್ನು ವೀಕ್ಷಿಸಲು ಜನರಿಗೆ ಹಣ ಪಾವತಿಸುವ ಮೂಲಕ 'ಮಾದರಿ ಮೀಟರಿಂಗ್ ಸೇವೆʼಗಳನ್ನು ತಮಗೆ ಬೇಕಾದ ಹಾಗೆ ನಿರ್ವಹಿಸುತ್ತಿದ್ದಾರೆ ಎಂದು ಅಪರಾಧ ವಿಭಾಗ ಪತ್ತೆ ಮಾಡಿದಾಗ TRP ಹಗರಣ ಪ್ರಕರಣ ಬೆಳಕಿಗೆ ಬಂತು. ತಾನು, ಮನೆಗಳಿಗೆ ಹಣ ನೀಡುವ ಮೂಲಕ ಕೆಲವು ಟಿವಿ ಚಾನೆಲ್ ಗಳ ಟಿಆರ್‌ಪಿ ಹೆಚ್ಚಿಸುತ್ತಿದ್ದುದನ್ನು ಸ್ವತಃ ಬಹಿರಂಗಪಡಿಸಿದ ವಿಶಾಲ್ ವೇದ್ ಭಂಡಾರಿ ಎಂಬಾತನನ್ನು ಪ್ರಕರಣದಲ್ಲಿ ಬಂಧಿಸಲಾಯಿತು.
ಪ್ರಕರಣದ ಕುರಿತು ವಿಚಾರಣೆ ಕೈಗೊಂಡಾಗ, ಮನೆಯ ಮಾಲೀಕರು ತಾವು ನೋಡದಿದ್ದರೂ ತಮ್ಮ ಟಿವಿ ಸೆಟ್‌ಗಳನ್ನು ನಿರ್ದಿಷ್ಟ ಚಾನಲ್‌ಗೆ ಬದಲಾಯಿಸಲೂ ಹಣ ಸ್ವೀಕರಿಸಿದ್ದಾರೆ ಎಂದು ಒಪ್ಪಿಕೊಂಡಿದ್ದರು. ಮುಂಬೈ ಕ್ರೈಂ ಬ್ರಾಂಚ್ ನವೆಂಬರ್ 2020 ರಲ್ಲಿ ಪ್ರಕರಣದ ಕುರಿತು ಚಾರ್ಜ್‌ಶೀಟ್ ಸಲ್ಲಿಸಿತು. ಈ ಹಗರಣದಿಂದ ರಿಪಬ್ಲಿಕ್ ಟಿವಿ ಚಾನೆಲ್ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಹೆಚ್ಚಿನ ಆದಾಯವನ್ನು ಗಳಿಸಿತು ಎಂದು ಉಲ್ಲೇಖಿಸಿತ್ತು. ಆದರೂ, ಜೂನ್ 2021 ರವರೆಗೆ ಕ್ರೈಂ ಬ್ರಾಂಚ್ ಅರ್ನಾಬ್ ಗೋಸ್ವಾಮಿ ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಚಾರ್ಜ್‌ಶೀಟ್ ನಲ್ಲಿ ಉಲ್ಲೇಖಸಿರಲಿಲ್ಲ.
ಈ ಪ್ರಕರಣದಲ್ಲಿ 10ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ಎಲ್ಲ ಆರೋಪಿಗಳಿಗೆ ಈಗಾಗಲೇ ಜಾಮೀನು ಮಂಜೂರಾಗಿದೆ. ಸೆಕ್ಷನ್ 321 ರ ಅಡಿಯಲ್ಲಿ ಪ್ರಕರಣವನ್ನು ಹಿಂಪಡೆಯಲು ಅವಕಾಶ ನೀಡುವಂತೆ ಕ್ರೈಂ ಬ್ರಾಂಚ್ ನವೆಂಬರ್ 2023 ರಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಮುಂಬೈ ಪೊಲೀಸ್ ತನಿಖೆಯಲ್ಲಿನ ವಿರೋಧಾಭಾಸಗಳು ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ರಾಜ್ಯ ಗೃಹ ಇಲಾಖೆ ಪ್ರಕರಣವನ್ನು ಹಿಂಪಡೆಯಲು ನಿರ್ಧಾರ ಕೈಗೊಂಡಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಪ್ರಕರಣದ ಕುರಿತು ಆಲಿಸಿದ ನ್ಯಾಯಾಲಯವು ಬುಧವಾರ ಪ್ರಕರಣವನ್ನು ಹಿಂಪಡೆಯಲು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿತು. ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡುವ ಆದೇಶವನ್ನು ಜಾರಿಗೊಳಿಸಿತು.