ಟೈಗರ್ ಮೆಮೊನ್ನ 14 ಆಸ್ತಿಗಳನ್ನು ಕೇಂದ್ರ ಸರಕಾರಕ್ಕೆ ಹಸ್ತಾಂತರಿಸಲು ಮುಂಬೈ ಕೋರ್ಟ್ ಆದೇಶ

ಸಾಂದರ್ಭಿಕ ಚಿತ್ರ | PC : freepik.com
ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಸೂತ್ರಧಾರಿಗಳಲ್ಲಿ ಒಬ್ಬನೆನ್ನಲಾದ ಟೈಗರ್ ಮೆಮೊನ್ಗೆ ಸೇರಿದ 14 ಆಸ್ತಿಗಳನ್ನು ಕೇಂದ್ರ ಸರಕಾರಕ್ಕೆ ಹಸ್ತಾಂತರಿಸುವಂತೆ ಮುಂಬೈನ ವಿಶೇಷ ನ್ಯಾಯಾಲಯವೊಂದು ಮಂಗಳವಾರ ಆದೇಶಿಸಿದೆ.
ಟಾಡಾ (ಭಯೋತ್ಪಾದನೆ ಹಾಗೂ ವಿಧ್ವಂಸಕ ಚಟುವಟಿಕೆಗಳ (ತಡೆ) ಕಾಯ್ದೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಈ ಆಸ್ತಿಗಳು 1994ರಿಂದೀಚೆಗೆ ಬಾಂಬೆ ಹೈಕೋರ್ಟ್ನ ರಿಸೀವರ್ ಅವರ ವಶದಲ್ಲಿತ್ತು.
ಬಾಂದ್ರಾ (ಪಶ್ಚಿಮ)ದಲ್ಲಿರುವ ಕಟ್ಟಡದಲ್ಲಿನ ಒಂದು ಫ್ಲ್ಯಾಟ್, ಮಾಹಿಮ್ ನಲ್ಲಿರುವ ಕಚೇರಿಯ ಆವರಣ, ಮಾಹಿಮ್ನಲ್ಲಿರುವ ತೆರೆದ ನಿವೇಶನ, ಸಾಂತಾಕ್ರೂಝ್ (ಪೂರ್ವ)ನಲ್ಲಿರುವ ಖಾಲಿ ನಿವೇಶನ ಹಾಗೂ ಒಂದು ಫ್ಲ್ಯಾಟ್, ಕುರ್ಲಾದ ಕಟ್ಟಡವೊಂದರಲ್ಲಿನ ಎರಡು ಫ್ಲ್ಯಾಟ್ಗಳು ಈ 14 ಆಸ್ತಿಗಳಲ್ಲಿ ಒಳಗೊಂಡಿವೆ.
ವಿಶೇಷ ಟಾಡಾ ಕೋರ್ಟ್ ನ ನ್ಯಾಯಾಧೀಶ ವಿ.ಡಿ. ಕೇದಾರ್ ಅವರು ಕಳೆದ ವಾರ ಪ್ರಕಟಿಸಿದ ಆದೇಶವೊಂದರಲ್ಲಿ, ಸ್ಥಿರಾಸ್ಥಿಗಳ ಒಡೆತನವನ್ನು ಕೇಂದ್ರ ಸರಕಾರಕ್ಕೆ ಹಸ್ತಾಂತರಿಸಬೇಕೆಂದು ತಿಳಿಸಿದ್ದಾರೆ.
ಟೈಗರ್ ಮೆಮೊನ್ ಈಗಲೂ ತಲೆಮರೆಸಿಕೊಂಡಿದ್ದು, ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಇನ್ನೋರ್ವ ದೋಷಿಯಾದ ಯಾಕೂಬ್ ಮೆಮೊನ್ ನನ್ನು ಗಲ್ಲಿಗೇರಿಸಲಾಗಿತ್ತು.
1993ರ ಮಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ 1994ರಲ್ಲಿ ಈ ಆಸ್ತಿಗಳನ್ನು ವಿಶೇಷ ಟಾಡಾ ನ್ಯಾಯಾಲಯವು ಮುಟ್ಟುಗೋಲು ಹಾಕಿದ ಬಳಿಕ, ಅವು ಮುಂಬೈ ಹೈಕೋರ್ಟ್ನ ವಶದಲ್ಲಿತ್ತು.