ಆರೆಸ್ಸೆಸ್ ಮಾನಹಾನಿ ಪ್ರಕರಣ: ರಾಹುಲ್ ಗಾಂಧಿಗೆ ಮುಂಬೈ ಹೈಕೋರ್ಟ್ ರಿಲೀಫ್
ರಾಹುಲ್ ಗಾಂಧಿ | PC : PTI
ಮುಂಬೈ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ರಾಷ್ಟ್ರೀಯ ಸ್ವಯಂಸೇವಕ ಸಂಘ(RSS)ದ ಕಾರ್ಯಕರ್ತರೊಬ್ಬರು ದಾಖಲಿಸಿರುವ ಮಾನಹಾನಿ ಪ್ರಕರಣದಲ್ಲಿ ಹೆಚ್ಚುವರಿ ದಾಖಲೆಗಳನ್ನು ಪುರಾವೆಯಾಗಿ ಸಲ್ಲಿಸಲು ಅವಕಾಶ ನೀಡಿದ ಭೀವಂಡಿ ನ್ಯಾಯಾಲಯದ ಆದೇಶವನ್ನು ಮುಂಬೈ ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ.
ನ್ಯಾಯಮೂರ್ತಿ ಪೃಥ್ವಿರಾಜ್ ಕೆ.ಚವ್ಹಾಣ್ ಈ ಸಂಬಂಧ ತೀರ್ಪಿ ನೀಡಿದ್ದಾರೆ. ಆರೆಸ್ಸೆಸ್ ಕಾರ್ಯಕರ್ತ ರಾಜೇಶ್ ಕುಂಟೆ ಅವರು ವಿಳಂಬವಾಗಿ ಕೆಲ ನಿರ್ದಿಷ್ಟ ದಾಖಲೆಗಳನ್ನು ಸಲ್ಲಿಸಲು ವಿಚಾರಣಾ ನ್ಯಾಯಾಲಯ ಅವಕಾಶ ನೀಡಿದ್ದರ ವಿರುದ್ಧ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.
ಥಾಣೆಯ ಭೀವಂಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜೂನ್ 3ರಂದು ರಾಹುಲ್ ವಿರುದ್ಧದ ದೂರುದಾರರಾದ ಕುಂಠೆ ಸಲ್ಲಿಸಿದ್ದ ಕೆಲ ನಿರ್ದಿಷ್ಟ ದಾಖಲೆಗಳನ್ನು ಸ್ವೀಕರಿಸಿತ್ತು.
ಮಾನಹಾನಿಕರ ಭಾಷಣದ್ದು ಎನ್ನಲಾದ ಟ್ರಾನ್ಸ್ಸ್ಕ್ರಿಪ್ಟ್ ಅನ್ನು ಪುರಾವೆಯಾಗಿ ಸಲ್ಲಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್ ಅವಕಾಶ ನೀಡಿತ್ತು.
ಇದನ್ನು ರಾಹುಲ್ ಗಾಂಧಿ ಹೈಕೋಟ್ನಲ್ಲಿ ಪ್ರಶ್ನಿಸಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಕ್ರಮ, ಮತ್ತೊಂದು ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ಆದೇಶದ ಉಲ್ಲಂಘನೆ ಎಂದು ಪ್ರತಿಪಾದಿಸಿದ್ದರು.