ಮುಂಬೈ ಹೋರ್ಡಿಂಗ್ ಕುಸಿತ ಪ್ರಕರಣ: ಜಾಹೀರಾತು ಸಂಸ್ಥೆಯಿಂದ ಹಣ ಪಡೆದಿದ್ದ ಉದ್ಯಮಿ ಬಂಧನ
PC : ANI
ಮುಂಬೈ: ಹದಿನೇಳು ಜೀವಗಳನ್ನು ಬಲಿ ಪಡೆದ ಮುಂಬೈ ಹೋರ್ಡಿಂಗ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರ್ಡಿಂಗ್ ನಿರ್ಮಿಸಿದ ಇಗೊ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಿಂದ 46 ಲಕ್ಷ ರೂಪಾಯಿ ಪಡೆದ ಅರೋಪ ಎದುರಿಸುತ್ತಿರುವ ಉದ್ಯಮಿ ಅರ್ಷದ್ ಖಾನ್ ಎಂಬವರನ್ನು, ಘಟನೆ ನಡೆದು ಏಳು ತಿಂಗಳ ಬಳಿಕ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಗೋವಂದಿ ಮೂಲದ ಉದ್ಯಮಿ ಅರ್ಷದ್ ಖಾನ್, ಇಗೊ ಮೀಡಿಯಾ ನಿರ್ದೇಶಕರಾದ ಭವೇಶ್ ಭಿಂದೆ ಮತ್ತು ಜಾಹ್ನವಿ ಮರಾಠೆ ಎಂಬುವವರಿಂದ ಈ ಹೋರ್ಡಿಂಗ್ಗೆ ಅನುಮೋದನೆ ನೀಡಲು ಒಂದು ಕೋಟಿ ರೂಪಾಯಿ ಪಡೆದಿದ್ದರು ಎಂದು ಆಪಾದಿಸಲಾಗಿತ್ತು. ಘಟನೆ ಸಂಭವಿಸಿದ ಬಳಿಕ, ನಿರೀಕ್ಷಣಾ ಜಾಮೀನು ತಿರಸ್ಕೃತವಾದ ಹಿನ್ನೆಲೆಯಲ್ಲಿ ಅರ್ಷದ್ ಈ ವರ್ಷದ ಜುಲೈ ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ.
ಜಿಆರ್ ಪಿ ಮಾಜಿ ಮುಖ್ಯಸ್ಥ ಕೌಸರ್ ಖಾಲೀದ್, ಅವರ ಪತ್ನಿ ಮತ್ತು ಇಗೋ ಮೀಡಿಯಾ ನಿರ್ದೇಶಕ ಭವಿಷ್ ಭಿಂಡೆ ಜತೆ ಅರ್ಷದ್ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಈ ಅಕ್ರಮ ಹೋರ್ಡಿಂಗ್ ನಿರ್ಮಿಸಿದ ಇಗೊ ಮೀಡಿಯಾ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ವಿಶೇಷ ತನಿಖಾ ತಂಡ ಪರಿಶೀಲನೆ ನಡೆಸಿದಾಗ, 2021 ಮತ್ತು 2022ರಲಿ 10 ಬ್ಯಾಂಕ್ ಖಾತೆಗಳಿಗೆ 39 ವಹಿವಾಟುಗಳಲ್ಲಿ 46.5 ಲಕ್ಷ ರೂಪಾಯಿ ಪಾವತಿಸಿದ್ದು ಹಾಗೂ ಆ ಬಳಿಕ ಇದನ್ನು ಅರ್ಷದ್ ಖಾನ್ ಪಡೆದಿದ್ದು ಪತ್ತೆಯಾಗಿತ್ತು. ಆದರೆ ಬ್ರಾಂಡೆಡ್ ಸರಕುಗಳನ್ನು ಹಾಗೂ ಕನ್ನಡಕಗಳನ್ನು ಭಿಂಡೆಗೆ ಪೂರೈಸಿದ್ದಕ್ಕಾಗಿ ಹಣ ಪಡೆದಿರುವುದಾಗಿ ಅರ್ಷದ್ ಹೇಳಿದ್ದ. ಆರೋಪಿಯ ಇಬ್ಬರು ನಿಕಟ ಸಂಬಂಧಿಗಳಿಗೆ ಕೂಡಾ ಹಣ ವರ್ಗಾಯಿಸಲಾಗಿತ್ತು. ಈ ಸಂಬಂಧ ಅವರಿಬ್ಬರು ಕೂಡಾ ಯಾವುದೇ ಸಮರ್ಥನೆ ನೀಡಿರಲಿಲ್ಲ.
ಬಿಆರ್ ಪಿ ಮೈದಾನದ ಬಳಿ ಅಳವಡಿಸಿದ್ದ 120 ಅಡಿ ಉದ್ದ ಹಾಗೂ 140 ಅಡಿ ಅಗಲದ ಈ ಬೃಹತ್ ಹೋರ್ಡಿಂಗ್ 2024ಮೇ 13ರಂದು ಭಾರೀ ಗಾಳಿಗೆ ಕುಸಿದು ಬಿದ್ದು, 17 ಮಂದಿ ಮರತಪಟ್ಟಿದ್ದರು ಹಾಗೂ 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಸಂಬಂಧ ಹೋರ್ಡಿಂಗ್ ಅಳವಡಿಸಿದ್ದ ಇಗೋ ಮೀಡಿಯಾ ಕಂಪನಿಯ ಭವಿಷ್ ಭಿಂಡೆ, ಜಾಹ್ನವಿ ಮರಾಠೆ, ಸಾಗರ್ ಪಾಟೀಲ್ ಮತ್ತು ಮನೋಜ್ ಸಂಘು ಎಂಬುವವರನ್ನು ಬಂಧಿಸಲಾಗಿತ್ತು.