ಮುಂಬೈ ಹೋರ್ಡಿಂಗ್ ಕುಸಿದು ದುರಂತ | ಅವಶೇಷಗಳ ಅಡಿಯಲ್ಲಿ ಮತ್ತೆರೆಡು ಮೃತದೇಹಗಳು ಪತ್ತೆ
PC : ANI
ಮುಂಬೈ: ಮುಂಬೈ ಹೋರ್ಡಿಂಗ್ ಕುಸಿದು ದುರಂತ ಸಂಭವಿಸಿದ ಸ್ಥಳದಲ್ಲಿ ಮತ್ತೆರೆಡು ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಘಾಟ್ಖೋಪರ್ನಲ್ಲಿ ಹೋರ್ಡಿಂಗ್ ಕುಸಿದ ಸ್ಥಳದಲ್ಲಿ ನಿನ್ನೆ ರಾತ್ರಿ ಈ ಎರಡು ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ದೂಳಿನ ಬಿರುಗಾಳಿ ಹಾಗೂ ಭಾರೀ ಮಳೆಯಿಂದಾಗಿ ಖಾಟ್ಖೋಪರ್ನ ಚೆಡ್ಡಾ ನಗರ ಪ್ರದೇಶದಲ್ಲಿರುವ ಸರಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ)ಗೆ ಸೇರಿದ ತುಂಡು ಭೂಮಿಯಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ಈ ಹೋರ್ಡಿಂಗ್ ಸೋಮವಾರ ಸಂಜೆ ಪೆಟ್ರೋಲ್ ಪಂಪ್ ಮೇಲೆ ಕುಸಿದು ಬಿತ್ತು ಎಂದು ಅವರು ಹೇಳಿದ್ದಾರೆ.
ರಕ್ಷಣಾ ತಂಡ ಕುಸಿದ ಹೋರ್ಡಿಂಗ್ನ ಅವಶೇಷಗಳ ಅಡಿಯಿಂದ ಈ ಹಿಂದೆ 89 ಮಂದಿಯನ್ನು ರಕ್ಷಿಸಿದೆ. ಅವರಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಹಾಗೂ 75 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರಂತ ನಡೆದ ಸ್ಥಳದಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭ ಬುಧವಾರ ಬೆಳಗ್ಗೆ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಅಲ್ಲಿ ನಿಯೋಜಿಸಲಾಗಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು ಎಂದು ಎನ್ಡಿಆರ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ 40 ಗಂಟೆಗಳ ಬಳಿಕವೂ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.