ಮುಂಬೈನ ಹೋಟೆಲ್ ನಲ್ಲಿ ಅಗ್ನಿ ಅವಘಡ: ಮೂವರು ಮೃತ್ಯು, 5 ಮಂದಿಗೆ ಗಾಯ
ಮುಂಬೈ; ರವಿವಾರ ಮುಂಬೈನ ಹೋಟೆಲ್ ಗೆಲಾಕ್ಸಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದರಿಂದ ಮೂರು ಮಂದಿ ಮೃತಪಟ್ಟು, ಐದು ಮಂದಿ ಗಾಯಗೊಂಡಿದ್ದಾರೆ. ಮುಂಬೈನ ಸಾಂತಾಕ್ರೂಝ್ ನಲ್ಲಿರುವ ಈ ಹೋಟೆಲ್ ನಲ್ಲಿ ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಬೆಂಕಿ ಅವಘಡ ಸಂಭವಿಸಿದೆ.
9 ಮಂದಿಯನ್ನು ರಕ್ಷಿಸಿ, ಅವರನ್ನು ಕೂಪರ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅಧಿಕಾರಿಯೊಬ್ಬರ ಪ್ರಕಾರ, ಹೋಟೆಲ್ ನ ಮೂರನೆಯ ಮಹಡಿಯಲ್ಲಿ ಬೆಂಕಿ ಹೊತ್ತುಕೊಂಡಿದ್ದು, ಇದರಿಂದ ಒಂದೆರಡು ಕೊಠಡಿಗಳಲ್ಲಿನ ವಿದ್ಯುತ್ ತಂತಿ ಜೋಡಣೆ, ವಿದ್ಯುತ್ ಘಟಕಗಳು, ಹವಾನಿಯಂತ್ರಣ ವ್ಯವಸ್ಥೆ, ಪರದೆಗಳು, ನೆಲಹಾಸುಗಳು, ಮರದ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ.
ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಶನ್ ನ ಅಧಿಕಾರಿಯೊಬ್ಬರು, ಅಗ್ನಿ ಸುರಕ್ಷತಾ ರೂಢಿಗಳನ್ನು ಅಳವಡಿಸಿಕೊಳ್ಳುವಲ್ಲಿ ಆ ಹೋಟೆಲ್ ವಿಫಲವಾಗಿದ್ದುರಿಂದ ಅದಕ್ಕೆ ಇತ್ತೀಚೆಗಷ್ಟೆ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ಕುರಿತು ಬೃಹನ್ ಮುಂಬೈ ಮುನಿಸಿಪಾಲಿಟಿ ಕಾರ್ಪೊರೇಶನ್ ಪ್ರಕರಣವನ್ನು ದಾಖಲಿಸಿಕೊಂಡರೂ, ಹೋಟೆಲ್ ಕಡೆಯಿಂದ ಯಾರೊಬ್ಬರೂ ನಮ್ಮ ನೋಟಿಸ್ ಗೆ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.