ಸೆಬಿ ಅಧ್ಯಕ್ಷೆಯ ರಾಜೀನಾಮೆ ಆಗ್ರಹಿಸಿ ಉದ್ಯೋಗಿಗಳಿಂದ ಮುಂಬೈ ಪ್ರಧಾನ ಕಚೇರಿಯಲ್ಲಿ ಧರಣಿ
ಮಾಧವಿ ಪುರಿ ಬುಚ್ | PC : PTI
ಮುಂಬೈ: ಭಾರತೀಯ ಶೇರು ವಿನಿಮಯ ಮಂಡಳಿ (ಸೆಬಿ)ಯ ಅಧ್ಯಕ್ಷೆ ಮಾಧವಿ ಪುರಿ ಬುಚ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸುಮಾರು 200 ಉದ್ಯೋಗಿಗಳು ಗುರುವಾರ ಅದರ ಮುಂಬೈಯಲ್ಲಿರುವ ಪ್ರಧಾನ ಕಚೇರಿಯಲ್ಲಿ ಧರಣಿ ನಡೆಸಿದ್ದಾರೆ.
ಕೆಲವು ದಿನಗಳ ಹಿಂದೆ, ಸೆಬಿಯ ‘‘ವೃತ್ತಿಪರವಲ್ಲದ ಮತ್ತು ಒತ್ತಡದಾಯಕ ಕೆಲಸದ ಸಂಸ್ಕೃತಿಯ’’ ಬಗ್ಗೆ ಉದ್ಯೋಗಿಗಳು ಹಣಕಾಸು ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದ್ದರು. ‘‘ಹೊರಗಿನ ಶಕ್ತಿಗಳಿಂದ ತಪ್ಪು ದಾರಿಗೆಳೆಯಲ್ಪಟ್ಟು’’ ಈ ಪತ್ರವನ್ನು ಬರೆಯಲಾಗಿದೆ ಎಂಬುದಾಗಿ ಸೆಬಿಯು ಪತ್ರಿಕಾ ಹೇಳಿಕೆಯೊಂದನ್ನು ನೀಡಿದ ಒಂದು ದಿನದ ಬಳಿಕ ಉದ್ಯೋಗಿಗಳು ಗುರುವಾರ ಧರಣಿ ನಡೆಸಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ ಧರಣಿ ನಡೆಸಿದ ಬಳಿಕ, ಉದ್ಯೋಗಿಗಳು ತಮ್ಮ ಕಚೇರಿಗಳಿಗೆ ಮರಳಿದರು ಎಂಬುದಾಗಿ ವರದಿಯಾಗಿದೆ.
‘‘ಪತ್ರಿಕಾ ಹೇಳಿಕೆಯ ಮೂಲಕ ಉನ್ನತ ಆಡಳಿತವು ನಡೆಸಿರುವ ಬೆದರಿಕೆ ತಂತ್ರವನ್ನು ಧಿಕ್ಕರಿಸುವುದು ಮತ್ತು ಏಕತೆಯನ್ನು ತೋರಿಸುವುದು ಈ ಪ್ರತಿಭಟನೆಯ ಉದ್ದೇಶವಾಗಿದೆ’’ ಎಂಬ ಸಂದೇಶವನ್ನು ಪ್ರತಿಭಟನಾನಿರತರು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
‘‘ಪತ್ರಿಕಾ ಹೇಳಿಕೆಯನ್ನು ವಾಪಸ್ ಪಡೆಯಬೇಕು ಮತ್ತು ಸೆಬಿ ಉದ್ಯೋಗಿಗಳ ವಿರುದ್ಧ ಸುಳ್ಳುಗಳನ್ನು ಹರಡುತ್ತಿರುವುದಕ್ಕಾಗಿ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ರಾಜೀನಾಮೆ ನೀಡಬೇಕು ಎನ್ನುವುದು ಸೆಬಿ ಉದ್ಯೋಗಿಗಳ ತಕ್ಷಣದ ಬೇಡಿಕೆಯಾಗಿದೆ’’ ಎಂಬುದಾಗಿ ತಮ್ಮ ಆಂತರಿಕ ಸಂದೇಶದಲ್ಲಿ ಧರಣಿನಿರತರು ಹೇಳಿದ್ದಾರೆ ಎನ್ನಲಾಗಿದೆ.
ಸೆಬಿ ಉದ್ಯೋಗಿಗಳು ಕಳೆದ ತಿಂಗಳು ಹಣಕಾಸು ಸಚಿವಾಲಯಕ್ಕೆ ಪತ್ರವೊಂದನ್ನು ಬರೆದು, ಸೆಬಿಯಲ್ಲಿ ಕೆಲಸ ಮಾಡುವುದು ‘‘ಅತ್ಯಂತ ಒತ್ತಡದಾಯಕ’’ವಾಗಿದೆ ಮತ್ತು ಅಲ್ಲಿ ‘‘ಪ್ರತಿಕೂಲ ಕೆಲಸದ ವಾತಾವರಣವಿದೆ’’ ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸೆಬಿ, ಉದ್ಯೋಗಿಗಳು ಅತ್ಯುನ್ನತ ಮಟ್ಟದ ನಿರ್ವಹಣೆ ಮತ್ತು ಉತ್ತರದಾಯಿತ್ವವನ್ನು ಹೊಂದಬೇಕಾಗಿಲ್ಲ ಎನ್ನುವುದನ್ನು ‘‘ಹೊರಗಿನ ಶಕ್ತಿಗಳು’’ ಅವರಿಗೆ ಮನಗಾಣಿಸಿದ್ದಾರೆ ಎಂದು ಹೇಳಿತ್ತು. ಆದರೆ, ಆ ಶಕ್ತಿಗಳು ಯಾವುವು ಎನ್ನುವುದನ್ನು ಸೆಬಿ ಸ್ಪಷ್ಟಪಡಿಸಿಲ್ಲ.
ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ವಿದೇಶಗಳಲ್ಲಿರುವ ಅದಾನಿ ಸಮೂಹದ ಅಕ್ರಮ ಫಂಡ್ಗಳಲ್ಲಿ ಹೂಡಿಕೆ ಮಾಡಿದ್ದಾರೆ, ಹಾಗಾಗಿ ಅವರು ಹಿತಾಸಕ್ತಿ ಸಂಘರ್ಷವನ್ನು ಹೊಂದಿದ್ದಾರೆ ಎಂದು ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯು ಇತ್ತೀಚೆಗೆ ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ. ಹಿತಾಸಕ್ತಿ ಸಂಘರ್ಷದ ಕಾರಣದಿಂದಾಗಿ, ಅದಾನಿ ವಿರುದ್ಧದ ಗಂಭೀರ ಆರೋಪಗಳ ಬಗ್ಗೆ ಸೆಬಿಗೆ ನಿಷ್ಪಕ್ಷವಾಗಿ ತನಿಖೆ ನಡೆಸಲು ಆಗುತ್ತಿಲ್ಲ ಎಂದು ಹೇಳಿದೆ.
ಅವರು ಸೆಬಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗಲೂ ತಾನು ಹಿಂದೆ ಕೆಲಸ ಮಾಡುತ್ತಿದ್ದ ಐಸಿಐಸಿಐ ಬ್ಯಾಂಕ್ನಿಂದ ವೇತನ ಪಡೆಯುವುದನ್ನು ಮುಂದುವರಿಸಿದ್ದಾರೆ ಎಂದು ಕಾಂಗ್ರೆಸ್ ಇತ್ತೀಚೆಗೆ ಆರೋಪಿಸಿದೆ.