ಮುಂಬೈ ದಿಲ್ಲಿಯಾಗುವುದು ಬೇಡ : ಪಟಾಕಿ ಆದೇಶವನ್ನು ಮಾರ್ಪಡಿಸಿದ ಹೈಕೋರ್ಟ್
Photo: NDTV
ಮುಂಬೈ: ಶುಕ್ರವಾರ ಬಾಂಬೆ ಹೈಕೋರ್ಟ್ ತನ್ನ ಹಿಂದಿನ ಆದೇಶವನ್ನು ಮಾರ್ಪಡಿಸಿದ್ದು, ವಾಯು ಮಾಲಿನ್ಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಪಟಾಕಿಯನ್ನು ಸಿಡಿಬಹುದು ಎಂದು ಹೇಳಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಮತ್ತು ನ್ಯಾ. ಜಿ.ಎಸ್.ಕುಲಕರ್ಣಿ ಅವರನ್ನೊಳಗೊಂಡಿದ್ದ ವಿಭಾಗೀಯ ನ್ಯಾಯಪೀಠವು, ಮಹಾರಾಷ್ಟ್ರದ ಎಲ್ಲ ನಗರಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿ 7 ಗಂಟೆಯಿಂದ 10 ಗಂಟೆಯವರೆಗೆ ಪಟಾಕಿ ಸಿಡಿಸಲು ನವೆಂಬರ್ 6ರಂದು ಅನುಮತಿ ನೀಡಿತ್ತು.
ಶುಕ್ರವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಮುಂಬೈನಲ್ಲಿ ಪಟಾಕಿ ಸಿಡಿತ ತಗ್ಗಿರುವುದನ್ನು ನ್ಯಾಯಪೀಠವು ಗಣನೆಗೆ ತೆಗೆದುಕೊಂಡಿತು.
ಈ ಸಂದರ್ಭದಲ್ಲಿ “ ದಿಲ್ಲಿ ಆಗುವುದು ಬೇಡ - ಮುಂಬೈಕರ್ ಗಳಾಗಿಯೇ ಉಳಿಯೋಣ” ಎಂದು ಮುಖ್ಯ ನ್ಯಾಯಮೂರ್ತಿ ಉಪಾಧ್ಯಾಯ ಕಿವಿಮಾತು ಹೇಳಿದರು.
ವಾಯು ಗುಣಮಟ್ಟ ಸೂಚ್ಯಂಕವು ಕಳಪೆಯಾಗಿರುವ ಹಲವಾರು ಸೂಕ್ಷ್ಮ ಪ್ರದೇಶಗಳು ನಗರದಲ್ಲಿವೆ ಎಂದು ನ್ಯಾಯಪೀಠವು ಹೇಳಿತು.
“ನಾವೀಗ ತುರ್ತು ಹಾಗೂ ತೀವ್ರ ಸ್ವರೂಪದ ಸ್ಥಿತಿಯಲ್ಲಿದ್ದೇವೆ. ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರೂ, ಅವನ್ನೂ ಮೀರಿ ಪ್ರಯತ್ನದ ಅಗತ್ಯವಿದೆ” ಎಂದು ಹೇಳಿದ ನ್ಯಾಯಪೀಠವು, ತನ್ನ ನವೆಂಬರ್ 6ರ ಆದೇಶವನ್ನು ಮಾರ್ಪಡಿಸಿ ಪಟಾಕಿ ಸಿಡಿಸುವ ಅವಧಿಯನ್ನು ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ನಿಗದಿಗೊಳಿಸಿತು.