ಮುನವ್ವರ್ ಫಾರೂಕಿಗೆ ಜೀವ ಬೆದರಿಕೆ ಸಾಧ್ಯತೆ | ಗುಪ್ತಚರ ಮೂಲಗಳ ಸುಳಿವು ; ಪೊಲೀಸ್ ಭದ್ರತೆ
ಮುನವ್ವರ್ ಫಾರೂಕಿ | PC : @munawar.faruqui \ instagram.com
ಮುಂಬೈ : ಜೀವಬೆದರಿಕೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಖ್ಯಾತ ಸ್ಟಾಂಡಪ್ ಕಾಮಿಡಿಯನ್ ಮುನವ್ವರ್ ಫಾರೂಕಿ ಅವರಿಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ತನಗೆ ಜೀವಬೆದರಿಕೆಯಿರುವ ಬಗ್ಗೆ ಫಾರೂಕಿ ಅವರು ದೂರು ನೀಡಿಲ್ಲವಾದರೂ, ತಮಗೆ ದೊರೆತ ಗುಪ್ತಚರ ಮಾಹಿತಿಗಳನ್ನು ಆಧರಿಸಿ ಅವರಿಗೆ ಪೊಲೀಸರು ಭದ್ರತೆಯನ್ನು ಒದಗಿಸಲು ನಿರ್ಧರಿಸಿದ್ದಾರೆ. ಆದರೆ ಯಾವುದೇ ಪಾತಕಿ ಗ್ಯಾಂಗ್ನಿಂದ ಅವರಿಗೆ ಜೀವಬೆದರಿಕೆಯಿದೆಯೇ ಎಂಬ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿಲ್ಲ.
ಬಂಧನದಲ್ಲಿರುವ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಜೊತೆ ನಂಟು ಹೊಂದಿರುವ ಗ್ಯಾಂಗ್ನಿಂದ ಫಾರೂಕಿಯವರಿಗೆ ಜೀವ ಬೆದರಿಕೆಯಿದೆಯೆಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ದಿಲ್ಲಿಯ ವಿವಾಹ ಕಾರ್ಯಕ್ರಮವೊಂದರಲ್ಲಿ ಬಂದೂಕುಧಾರಿಗಳು ಫಾರೂತಿ ಅವರ ಹತ್ಯೆಗೆ ಸಂಚು ಹೂಡಿದ್ದರೆಂಬ ವರದಿಗಳು ಬಂದಿದ್ದವು. ಆನಂತರ ಅವರನ್ನು ಗುಪ್ತಚರ ಸಂಸ್ಥೆಗಳು ಬಿಗಿಭದ್ರತೆಯೊಂದಿಗೆ ಮುಂಬೈಗೆ ವಾಪಸ್ ಕರೆತಂದಿದ್ದವು.
ಫಾರೂಕಿ ಅವರು ತನ್ನ ಕಾಮಿಡಿ ಕಾರ್ಯಕ್ರಮದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದಾರೆಂದು ಸಂಘಪರಿವಾರ ಬೆಂಬಲಿತ ಸಂಘಟನೆಗಳು ಆಪಾದಿಸುತ್ತಿವೆ. ಕೆಲವು ದಿನಗಳ ಹಿಂದೆ ಎನ್ಸಿಪಿ ನಾಯಕ ಬಾಬಾ ಸಿದ್ದೀಕಿ ಅವರ ಹತ್ಯೆ ಘಟನೆಯ ಬಳಿಕ ಮುನಾವರ್ ಅವರ ಭದ್ರತೆಯ ಬಗ್ಗೆ ಹೆಚ್ಚಿನ ಆತಂಕವುಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.