ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಕೊಲೆ ಪ್ರಕರಣ ದಾಖಲು
ಶೇಖ್ ಹಸೀನಾ (Photo:PTI)
ಢಾಕಾ: ಕಳೆದ ತಿಂಗಳು ನಡೆದಿದ್ದ ಹಿಂಸಾಚಾರದಲ್ಲಿ ದಿನಸಿ ಅಂಗಡಿ ಮಾಲಕರೊಬ್ಬರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹಾಗೂ ಇನ್ನಿತರ ಆರು ಮಂದಿಯ ವಿರುದ್ಧ ಹತ್ಯೆ ಪ್ರಕರಣ ದಾಖಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಿಂಸಾಚಾರದ ನಂತರ, ಶೇಖ್ ಹಸೀನಾರ ಸರಕಾರ ಪತನಗೊಂಡಿತ್ತು.
ವಿವಾದಾತ್ಮಕ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ಅವರ ಅವಾಮಿ ಲೀಗ್ ನೇತೃತ್ವದ ಸರಕಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದ ಬೆನ್ನಿಗೇ, ಕಳೆದ ವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಶೇಖ್ ಹಸೀನಾ, ಭಾರತಕ್ಕೆ ಪರಾರಿಯಾಗಿದ್ದರು.
ಕಳೆದ ತಿಂಗಳ ಹಿಂಸಾಚಾರದಲ್ಲಿ ಮೃತಪಟ್ಟಿದ್ದ ದಿನಸಿ ಅಂಗಡಿಯ ಮಾಲಕನ ಸ್ನೇಹಿತ ಅಬು ಸೈಯದ್ ಈ ದೂರು ದಾಖಲಿಸಿದ್ದು, ಜುಲೈ 19ರಂದು ಮುಹಮ್ಮದ್ ಪುರ್ ನಲ್ಲಿ ನಡೆದಿದ್ದ ಮೀಸಲಾತಿ ಸುಧಾರಣೆ ಹೋರಾಟದ ಮೆರವಣಿಗೆಯ ಸಂದರ್ಭದಲ್ಲಿ ಪೊಲೀಸರು ನಡೆಸಿದ್ದ ಗೋಲಿಬಾರ್ ಸಂದರ್ಭದಲ್ಲಿ ದಿನಸಿ ಮಳಿಗೆ ಮಾಲಕನು ಮೃತಪಟ್ಟಿದ್ದ ಎಂದು ಹೇಳಲಾಗಿದೆ.
ಈ ಪ್ರಕರಣದಲ್ಲಿ ಅವಾಮಿ ಲೀಗ್ ಪ್ರಧಾನ ಕಾರ್ಯದರ್ಶಿ ಒಬೈಕುಲ್ ಖಾದರ್, ಮಾಜಿ ಗೃಹ ಸಚಿವ ಅಸದುಝ್ಝಮನ್ ಖಾನ್ ಕಮಲ್ ಹಾಗೂ ಮಾಜಿ ಪೊಲೀಸ್ ಮಹಾ ನಿರ್ದೇಶಕ ಅಬ್ದುಲ್ಲಾ ಅಲ್ ಮಾಮುನ್ ಸೇರಿದಂತೆ ಇನ್ನೂ ಆರು ಮಂದಿಯನ್ನು ಆರೋಪಿಗಳನ್ನಾಗಿಸಲಾಗಿದೆ.
ಇದಲ್ಲದೆ, ಹೆಸರಿಸದ ಹಲವಾರು ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿಗಳು ಹಾಗೂ ಸರಕಾರಿ ಅಧಿಕಾರಿಗಳನ್ನು ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಲಾಗಿದೆ ಎಂದು ವರದಿಯಾಗಿದೆ.
ಆಗಸ್ಟ್ 5ರಂದು ಶೇಖ್ ಹಸೀನಾ ಸರಕಾರ ರಾಜೀನಾಮೆ ನೀಡಿದ ನಂತರ ನಡೆದಿರುವ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 230ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆ ಮೂಲಕ ಜುಲೈ ಮಧ್ಯ ಭಾಗದಲ್ಲಿ ಉದ್ಯೋಗ ಮೀಸಲಾತಿ ವಿರುದ್ಧ ಪ್ರತಿಭಟನೆಗಳು ಪ್ರಾರಂಭಗೊಂಡಾಗಿನಿಂದ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 560ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.