ಬಾಬಾ ಸಿದ್ದೀಕ್ ಕೊಲೆ | 26 ಆರೋಪಿಗಳ ವಿರುದ್ಧ ಮಕೋಕ ಜಾರಿ
ಬಾಬಾ ಸಿದ್ದೀಕ್ | PTI
ಮುಂಬೈ : ಎನ್ಸಿಪಿ ನಾಯಕ ಬಾಬಾ ಸಿದ್ದೀಕ್ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಮುಂಬೈ ಪೊಲೀಸರು ಶನಿವಾರ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಮಕೋಕ)ಯನ್ನು ಹೇರಿದ್ದಾರೆ.
ಅಕ್ಟೋಬರ್ 12ರಂದು, ಸಿದ್ದೀಕ್ರನ್ನು ಮುಂಬೈಯ ನಿರ್ಮಲ್ ನಗರ ಪ್ರದೇಶದಲ್ಲಿರುವ ಅವರ ಮಗ ಹಾಗೂ ಶಾಸಕ ಝೀಶನ್ ಸಿದ್ದೀಕ್ರ ಕಚೇರಿಯ ಹೊರಗೆ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದಿದ್ದರು.
ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ವಹಿಸಿಕೊಂಡಿತ್ತು. ಈ ಪ್ರಕರಣದಲ್ಲಿ, ಪೊಲೀಸರು ಈವರೆಗೆ 26 ಮಂದಿಯನ್ನು ಬಂಧಿಸಿದ್ದಾರೆ. ಇನ್ನೂ ಮೂವರನ್ನು ಪೊಲೀಸರು ಬಂಧಿಸಬೇಕಾಗಿದೆ.
1999ರ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯನ್ನು, ಸಂಘಟಿತ ಅಪರಾಧ ತಂಡಗಳ ಕ್ರಿಮಿನಲ್ ಚಟುವಟಿಕೆಗಳನ್ನು ತಡೆಯುವ, ನಿಯಂತ್ರಿಸುವ ಅಥವಾ ನಿಭಾಯಿಸುವ ಉದ್ದೇಶದಿಂದ ರೂಪಿಸಲಾಗಿದೆ. ಇಡೀ ಮಹಾರಾಷ್ಟ್ರಕ್ಕೆ ಅನ್ವಯವಾಗುವ ಕಾಯ್ದೆಯನ್ನು 2024ರ ಫೆಬ್ರವರಿ 24ರಂದು ಜಾರಿಗೆ ತರಲಾಗಿದೆ.
ಯಾವುದೇ ವ್ಯಕ್ತಿಯು ಸಂಘಟಿತ ಅಪರಾಧವನ್ನು ಮಾಡಿದರೆ ಮತ್ತು ಅದು ಯಾವುದೇ ವ್ಯಕ್ತಿಯ ಸಾವಿಗೆ ಕಾರಣವಾದರೆ ಮಕೋಕ ಕಾಯ್ದೆಯ ಅಡಿಯಲ್ಲಿ ಅದಕ್ಕೆ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುತ್ತದೆ. ದಂಡವನ್ನೂ ಪಾವತಿಸಬೇಕಾಗುತ್ತದೆ.
ಇತರ ಯಾವುದೇ ಪ್ರಕರಣದಲ್ಲಿ, ಆರೋಪಿಗೆ ಐದು ವರ್ಷಕ್ಕಿಂತ ಕಡಿಮೆಯಿಲ್ಲದ ಅವಧಿಯ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ ಹಾಗೂ ಅದನ್ನು ಜೀವಾವಧಿ ಶಿಕ್ಷೆಗೂ ವಿಸ್ತರಿಸಬಹುದಾಗಿದೆ ಮತ್ತು ದಂಡವನ್ನೂ ವಿಧಿಸಬಹುದಾಗಿದೆ.
ಎನ್ಸಿಪಿ ನಾಯಕ ಕೊಲೆ ಪ್ರಕರಣದ ಪ್ರಧಾನ ಆರೋಪಿ ಆಕಾಶದೀಪ್ ಗಿಲ್ನನ್ನು ಪಂಜಾಬ್ನಿಂದ ಬಂಧಿಸಲಾಗಿದೆ.