ಪ್ರೇಯಸಿಯ ಅಜ್ಜನ ಹತ್ಯೆ: ಆರೋಪಿಯನ್ನು ಥಳಿಸಿ ಕೊಂದ ಗ್ರಾಮಸ್ಥರು
ಲಕ್ನೋ: ಅಂಬೇಡ್ಕರ್ ನಗರದಲ್ಲಿ ವೃದ್ಧರೊಬ್ಬರನ್ನು ಇರಿದು ಹತ್ಯೆಗೈದ ಹಿನ್ನೆಲೆಯಲ್ಲಿ ಆರೋಪಿ ಅಸೀಮ್ (25) ಎಂಬಾತನನ್ನು ಉದ್ರಿಕ್ತ ಗ್ರಾಮಸ್ಥರು ಹೊಡೆದು ಸಾಯಿಸಿದ್ದಾರೆ.
ಝಾಜ್ವಾ ಗ್ರಾಮದಲ್ಲಿ ತನ್ನ ಪ್ರೇಯಸಿ ಅಯೇಷಾ ನೂರ್ (20) ಎಂಬಾಕೆಯನ್ನು ಭೇಟಿ ಮಾಡಲು ಮಂಗಳವಾರ ತಡರಾತ್ರಿಯಲ್ಲಿ ಆರೋಪಿ ಆಸೀಮ್ ತೆರಳಿದ್ದ. ಆದರೆ ಯುವತಿಯ ಅಜ್ಜ ಗುಲಾಂ ಅಹ್ಮದ್ (70) ಇದಕ್ಕೆ ವಿರೋಧ ವ್ಯಕ್ತಪಡಿಸಿದರು.
ಕೋಪಗೊಂಡ ಯುವಕ ಗುಲಾಂ ಅವರಿಗೆ ಇರಿದಿದ್ದು, ವೃದ್ಧನ ಚೀರಾಟ ಕೇಳಿ ಧಾವಿಸಿದ ಗ್ರಾಮಸ್ಥರು ಆಸೀಂನನ್ನು ಹೊಡೆದು ಸಾಯಿಸಿದರು. ಯುಪಿ 112 ಮತ್ತು ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದರು. ಆದರೆ ಇಬ್ಬರೂ ಆ ವೇಳೆಗಾಗಲೇ ಮೃತಪಟ್ಟಿದ್ದರು ಎಂದು ಠಾಣಾಧಿಕಾರಿ ಅರುಣ್ ಸರೋಜ್ ಹೇಳಿದ್ದಾರೆ.
ಆಯೇಷಾ, ಆಕೆಯ ತಾಯಿ ತೆಹ್ಸೀಬ್ ಫಾತಿಮಾ ಮತ್ತು ತಂದೆ ಹಿಲಾಲ್ ಅಹ್ಮದ್ ಕೂಡಾ ದಾಳಿಯಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಅಯೋಧ್ಯಾ ಪ್ರದೇಶದ ಐಜಿ ಪ್ರವೀಣ್ ಕುಮಾರ್ ಹಾಗೂ ಅಂಬೇಡ್ಕರ್ ನಗರ ಎಸ್ಪಿ ಎ.ಕೆ.ಸಿನ್ಹಾ ಸ್ಥಳಕ್ಕೆ ಭೇಟಿ ನೀಡಿದ್ದರು.
ಹಿಲಾಲ್ ನೀಡಿದ ದೂರಿನ ಮೇರೆಗೆ ಆಸೀಂ ಮತ್ತು ಸ್ನೇಹಿತ ಸಲ್ಮಾನ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬುಧವಾರ ನಸುಕಿನ 1.30ರ ವೇಳೆಗೆ ಆರೋಪಿಗಳಿಬ್ಬರು ಮನೆಗೆ ನುಗ್ಗಿದರು. ಆಗ ಎಚ್ಚರವಿದ್ದ ಅಜ್ಜ ಹಾಗೂ ಇವರ ನಡುವೆ ವಾಗ್ವಾದ ನಡೆಯಿತು. ಆಯೇಷಾಳನ್ನು ನೋಡಬೇಕು ಎಂದು ಆಸೀಂ ಪಟ್ಟು ಹಿಡಿದಿದ್ದು, ವಿವಾಹವಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಗುಲಾಂ ಇದಕ್ಕೆ ಒಪ್ಪದಿದ್ದಾಗ ಹಲವು ಬಾರಿ ಇರಿದು ಸಾಯಿಸಿದ ಎಂದು ಎಫ್ಐಆರ್ ನಲ್ಲಿ ವಿವರಿಸಲಾಗಿದೆ.
ಆಯೇಷಾ ಹಾಗೂ ಆಸೀಂ ನಡುವೆ ಪ್ರೇಮಸಂಬಂಧ ಇತ್ತು ಎನ್ನಲಾಗಿದ್ದು, ಕಳೆದ ತಿಂಗಳು ಇದು ಮುರಿದು ಬಿದ್ದಿತ್ತು. ಬೇರೆಯವರನ್ನು ತಾನು ವಿವಾಹವಾಗುತ್ತಿರುವುದಾಗಿ ಆಕೆ ತಿಳಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.