ಪರಿಶಿಷ್ಟರೆಂಬ ಕಾರಣಕ್ಕಾಗಿ ಮುರ್ಮು, ಕೋವಿಂದ್ ಅವರನ್ನು ಬಿಜೆಪಿ ಅಪಮಾನಿಸಿದೆ: ಖರ್ಗೆ
ದ್ರೌಪದಿ ಮುರ್ಮು , ಮಲ್ಲಿಕಾರ್ಜುನ ಖರ್ಗೆ | PC : PTI
ಹೊಸದಿಲ್ಲಿ: ದೇಶಾದ್ಯಂತ ಪರಿಶಿಷ್ಟ ಜಾತಿ, ಪಂಗಡಗಳವರು ಈಗಲೂ ತಾರತಮ್ಯವನ್ನು ಎದುರಿಸುತ್ತಿದ್ದಾರೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಕಳವಳ ವ್ಯಕ್ತಪಡಿಸಿದ್ದು, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಜಾತಿಗಳವರೆಂಬ ಕಾರಣಕ್ಕಾಗಿ ರಾಷ್ಟ್ರ ದ್ರೌಪದಿ ಮುರ್ಮು ಹಾಗೂ ಹಿಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಬಿಜೆಪಿ ಅಪಮಾನಿಸಿದೆಯೆಂದು ಆರೋಪಿಸಿದ್ದಾರೆ. ಅಯೋಧ್ಯೆಯ ರಾಮಮಂದಿರದ ವಿಗ್ರಹ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಹಾಗೂ ನೂತನ ಸಂಸತ್ ಭವನದ ಉದ್ಘಾಟನೆಗೆ ಮುರ್ಮು ಅವರಿಗೆ ಆಹ್ವಾನ ನೀಡಿರಲಿಲ್ಲ ಹಾಗೂ ರಾಮನಾಥ ಕೋವಿಂದ್ ಅವರಿಗೆ ನೂತನ ಸಂಸತ್ಭವನದ ಶಿಲಾನ್ಯಾಸವನ್ನು ನೆರವೇರಿಸಲು ಅವಕಾಶ ನೀಡಿರಲಿಲ್ಲವೆಂದು ಖರ್ಗೆ ಹೇಳಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಚಿಂತನಾ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ರಾಜಕೀಯ ಕಾರಣಗಳಿದಾಗಿ ಕಾಂಗ್ರೆಸ್ ಪಕ್ಷವು ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲವೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಯನ್ನು ಖರ್ಗೆ ತಳ್ಳಿಹಾಕಿದರು. ಈ ಸಲದ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟವು 400 ಸ್ಥಾನಗಳನ್ನು ಗೆಲ್ಲುವ ಕುರಿತಾದ ಪ್ರಧಾನಿ ಮೋದಿಯವರ ಚುನಾವಣಾ ಘೋಷಣೆಯನ್ನು ಕೂಡಾ ಖರ್ಗೆ ತಳ್ಳಿಹಾಕಿದರು. ಮೂರನೇ ಅವಧಿಗೆ ಅಧಿಕಾರಕ್ಕೇರುವ ಮೋದಿಯವರ ಕನಸು ಈಡೇರಲಾರದು. ಜನತೆ ಬದಲಾವಣೆಗಾಗಿ ಹಂಬಲಿಸುತ್ತಿದ್ದಾರೆ ಎಂದರು. ಬಿಜೆಪಿಗೆ ಮೂರನೇ ಸಲ ಅಧಿಕಾರ ನೀಡುವುದರಿಂದ ಅಪಾಯ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ ಅವರು, ಬಿಜೆಪಿ ನಾಯಕರು ಈಗಾಗಲೇ ಸಂವಿಧಾನವನ್ನು ಬದಲಾಯಿಸುವ ಮಾತನಾಡುತ್ತಿದ್ದಾರೆ ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮ ವಿಗ್ರಹದ ಪ್ರಾಣಪ್ರತಿಷ್ಠೆಯನ್ನು ವಿಧಿಯನ್ನು ನೆರವೇರಿಸುವಲ್ಲಿ ಮೋದಿ ಅವರು ಯಾಕೆ ನೇತೃತ್ವ ವಹಿಸಬೇಕು. ಅದೇನು ರಾಜಕೀಯ ಕಾರ್ಯಕ್ರಮವೇ ಅಥವಾ ಧಾರ್ಮಿಕ ಕಾರ್ಯಕ್ರಮವೇ? ಧರ್ಮದೊಂದಿಗೆ ರಾಜಕೀಯವನ್ನು ಯಾಕೆ ಬೆರೆಸುತ್ತೀರಿ ಎಂದು ಖರ್ಗೆ ಪ್ರಶ್ನಿಸಿದರು.
‘‘ದೇಶದ ಹಲವಾರು ದೇವಾಲಯಗಳಲ್ಲಿ ಪರಿಶಿಷ್ಟ ಜಾತಿಗಳವರನ್ನು ಪ್ರವೇಶಿಸಲು ಬಿಡುತ್ತಿಲ್ಲ. ಒಂದು ವೇಳೆ ನಾನು ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದರೆ ಅವರು(ಬಿಜೆಪಿ) ನನ್ನನ್ನು ಸಹಿಸುತ್ತಿದ್ದರೇ’’ ಎಂದು ಖರ್ಗೆ ಪ್ರಶ್ನಿಸಿದರು.