ಮಹಾರಾಷ್ಟ್ರ ಸಂಪುಟದಿಂದ 11 ಮಂದಿಗೆ ಕೊಕ್: ಅಸಮಾಧಾನದ ಹೊಗೆ
Photo: ANI
ಮುಂಬೈ: ಹಿಂದಿನ ಸರ್ಕಾರದಲ್ಲಿದ್ದ 11 ಮಂದಿ ಪ್ರಮುಖ ಸಚಿವರನ್ನು ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಕೂಟದ ಹೊಸ ಸರ್ಕಾರದಲ್ಲಿ ಕೈಬಿಟ್ಟಿರುವ ಕ್ರಮದ ಬಗ್ಗೆ ಬೆಂಬಲಿಗರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಛಗನ್ ಭುಜಬಲ್ ಅವರ ಬೆಂಬಲಿಗರು ಯೆವೋಲಾದಲ್ಲಿ ಬಹಿರಂಗವಾಗಿ ಪ್ರತಿಭಟನೆ ವ್ಯಕ್ತಪಡಿಸಿದ್ದು, ಹಲವು ಕಡೆಗಳಲ್ಲಿ ಅಸಮಾಧಾನ ಒಳಗೊಳಗೇ ಕುದಿಯುತ್ತಿದೆ.
ಆಡಳಿತಾರೂಢ ಮೈತ್ರಿಕೂಟದ ಮೂರು ಪ್ರಮುಖ ಪಕ್ಷಗಳಲ್ಲಿ, ಅಜಿತ್ ಪವಾರ್ ನೇತೃತ್ವದ ಎನ್ಸಿಪಿಗೆ ಸೇರಿದ ಐದು ಮಂದಿ ಪ್ರಮುಖ ನಾಯಕರನ್ನು ಕೈಬಿಡಲಾಗಿದೆ. ಅವರೆಂದರೆ ಛಗನ್ ಭುಜಬಲ್, ಧರ್ಮೇಂದ್ರ ರಾವ್ ಬಾಬಾ ಅಟ್ರಮ್, ಸಂಜಯ್ ಬಾನ್ಸೋಡೆ, ದಿಲೀಪ್ ವಲ್ಸೆ ಪಾಟೀಲ್ ಮತ್ತು ಅನಿಲ್ ಪಾಟೀಲ್. ಬಿಜೆಪಿ ಹಾಗೂ ಶಿವಸೇನೆಗೆ ಸೇರಿದ ತಲಾ ಮೂವರಿಗೆ ಹೊಸ ಸಂಪುಟದಲ್ಲಿ ಸ್ಥಾನ ಕಲ್ಪಿಸಿಲ್ಲ. ಬಿಜೆಪಿ ರವೀಂದ್ರ ಚವಾಣ್, ಸುಧೀರ್ ಮುಂಗಂಟಿವಾರ್ ಮತ್ತು ವಿಜಯ ಕುಮಾರ್ ಗಾವಿತ್ ಅವರನ್ನು ಕೈಬಿಟ್ಟರೆ, ಶಿವಸೇನೆ ತಾನಾಜಿ ಸಾವಂತ್, ಅಬ್ದುಲ್ ಸತ್ತಾರ್ ಮತ್ತು ದೀಪಕ್ ಕೇಸರ್ಕರ್ ಅವರನ್ನು ಕೈಬಿಟ್ಟಿದೆ.
"ನಾನು ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ ಹಾಗೂ ನಾಸಿಕ್ಗೆ ಹಿಂದಿರುಗುತ್ತೇನೆ" ಎಂದು ಛಗನ್ ಭುಜಬಲ್ ಬಹಿರಂಗವಾಗಿ ಘೋಷಿಸಿದ್ದಾರೆ. ತಮಗೆ ರಾಜ್ಯಸಭಾ ಸದಸ್ಯತ್ವದ ಭರವಸೆ ನೀಡಲಾಗಿದೆ. ಆದರೆ ಅದನ್ನು ಸ್ವೀಕರಿದರೆ ಯೆವೋಲಾ ಜನತೆಗೆ ನ್ಯಾಯ ಒದಗಿಸಿದಂತಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಂತೆಯೇ ಮುಂಗಂಟಿವಾರ್ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದು, ಸುಧೀರ್ಘ ಚರ್ಚೆ ಬಳಿಕ ತಮ್ಮನ್ನು ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೀಡಿರುವ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.
ಶಿವಸೇನಾ ಮುಖಂಡರು ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದು, ನರೇಂದ್ರ ಬೋಂಧೇಕರ್ ಈಗಾಗಲೇ ಪಕ್ಷದ ಎಲ್ಲ ಹುದ್ದೆಗಳನ್ನು ತ್ಯಜಿಸಿದ್ದಾರೆ. "ಸಚಿವಸ್ಥಾನ ಸಿಕ್ಕಿಲ್ಲ ಎನ್ನುವ ಬೇಸರ ಇಲ್ಲ; ಆದರೆ ನಮ್ಮೊಂದಿಗೆ ವರ್ತಿಸಿದ ಬಗ್ಗೆ ಅಸಮಾಧಾನವಿದೆ" ಎಂದು ವಿಜಯ ಶಿವತಾರೆ ಹೇಳಿದ್ದಾರೆ.