ಅಸ್ಸಾಮ್ ನಲ್ಲಿ ಮುಸ್ಲಿಮ್ ಜನಸಂಖ್ಯೆ ಸಾವು-ಬದುಕಿನ ವಿಷಯವಾಗಿದೆ: ಹಿಮಂತ ಬಿಸ್ವ ಶರ್ಮ
ಹಿಮಂತ ಬಿಸ್ವ ಶರ್ಮ | PTI
ಗುವಾಹಟಿ: ಅಸ್ಸಾಮ್ ನಲ್ಲಿ ಮುಸ್ಲಿಮ್ ಜನಸಂಖ್ಯೆ ಈಗ 40 ಶೇಕಡವನ್ನು ತಲುಪಿದ್ದು, ‘‘ಬದಲಾಗುತ್ತಿರುವ ಜನಸಂಖ್ಯಾ ಸ್ವರೂಪ’’ವೇ ನನಗೆ ದೊಡ್ಡ ಸಮಸ್ಯೆಯಾಗಿದೆ ಎಂದು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಬುಧವಾರ ಹೇಳಿದ್ದಾರೆ.
‘‘ಬದಲಾಗುತ್ತಿರುವ ಜನಸಂಖ್ಯಾ ಸ್ವರೂಪವೇ ನನಗೆ ದೊಡ್ಡ ಸಮಸ್ಯೆಯಾಗಿದೆ. ಅಸ್ಸಾಮ್ ನಲ್ಲಿ, ಮುಸ್ಲಿಮ್ ಜನಸಂಖ್ಯೆಯು ಇಂದು 40 ಶೇಕಡವನ್ನು ತಲುಪಿದೆ. 1951ರಲ್ಲಿ, ಮುಸ್ಲಿಮ್ ಜನಸಂಖ್ಯೆ 12 ಶೇಕಡ ಆಗಿತ್ತು. ಈಗ ನಾವು ಹಲವು ಜಿಲ್ಲೆಗಳನ್ನು ಕಳೆದುಕೊಂಡಿದ್ದೇವೆ. ಇದು ನನಗೆ ರಾಜಕೀಯ ವಿಷಯವಲ್ಲ. ಇದು ನನಗೆ ಸಾವು-ಬದುಕಿನ ವಿಷಯವಾಗಿದೆ’’ ಎಂದು ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಒಂದು ‘‘ನಿರ್ದಿಷ್ಟ ಧರ್ಮ’’ದ ಒಂದು ವರ್ಗದ ಜನರು ನಡೆಸುತ್ತಿರುವ ಅಪರಾಧ ಚಟುವಟಿಕೆಗಳು ಕಳವಳಕ್ಕೆ ಕಾರಣವಾಗಿದೆ ಎಂದು ಜುಲೈ ಒಂದ ರಂದು ಯಾವುದೇ ಸಮುದಾಯವನ್ನು ಹೆಸರಿಸದೆ ಶರ್ಮ ಹೇಳಿದ್ದರು.
‘‘ಒಂದು ಧರ್ಮಕ್ಕೆ ಸೇರಿದ ಜನರು ಮಾತ್ರ ಅಪರಾಧಗಳನ್ನು ಮಾಡುತ್ತಿದ್ದಾರೆ ಎಂಬುದಾಗಿ ನಾನು ಹೇಳುತ್ತಿಲ್ಲ. ಆದರೆ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯ ಬಳಿಕ ನಡೆದಿರುವ ಘಟನೆಗಳು ನನಗೆ ಚಿಂತೆಯ ವಿಷಯವಾಗಿದೆ’’ ಎಂದು ಅವರು ಹೇಳಿದ್ದರು.
ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರಗಳು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಲೆಕ್ಕಿಸದೆ ಬಾಂಗ್ಲಾದೇಶಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ ಎಂಬುದಾಗಿ ಜೂನ್ 23ರಂದು ಅವರು ಹೇಳಿಕೊಂಡಿದ್ದರು.
ಬಾಂಗ್ಲಾದೇಶ ಮೂಲದ ಅಲ್ಪಸಂಖ್ಯಾತ ಸಮುದಾಯವು ಅಸ್ಸಾಮ್ ನಲ್ಲಿ ಕೋಮುವಾದಿ ಚಟುವಟಿಕೆಗಳಲ್ಲಿ ತೊಡಗಿರುವ ಏಕೈಕ ಸಮುದಾಯವಾಗಿದೆ ಎಂಬುದಾಗಿಯೂ ಅವರು ಹೇಳಿದ್ದರು.
ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ-ಎಜಿಪಿ-ಯುಪಿಪಿಎಲ್ ಮೈತ್ರಿಕೂಟವು ಅಸ್ಸಾಮ್ ನ 14 ಲೋಕಸಭಾ ಸ್ಥಾನಗಳ ಪೈಕಿ 11ರಲ್ಲಿ ಗೆದ್ದಿದೆ. ಉಳಿದ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಜಯಿಸಿದೆ.