ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಶೇ. 4.87ಕ್ಕೆ ಇಳಿಕೆ : ಎಐಎಸ್ಎಚ್ಇ ವರದಿ
PC : PTI
ಹೊಸದಿಲ್ಲಿ : ಭಾರತದ ಉನ್ನತ ಶಿಕ್ಷಣದಲ್ಲಿ 2021-22ರ ಅವಧಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಪ್ರಾತಿನಿಧ್ಯ ಶೇ. 4.87ಕ್ಕೆ ಇಳಿಕೆಯಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.
ದಾಖಲಾದ 43,268,181 ವಿದ್ಯಾರ್ಥಿಗಳಲ್ಲಿ ಮುಸ್ಲಿಮರು ಕೇವಲ 2,108,033 ಇದ್ದಾರೆ. ಇದು 2020ರಲ್ಲಿ ಶೇ. 5.5 ಇದ್ದುದು 2021ರಲ್ಲಿ ಶೇ. 4.6ಕ್ಕೆ ನಿರಂತರ ಇಳಿಕೆಯಾಗಿರುವುದನ್ನು ಸೂಚಿಸಿದೆ.
ರಾಷ್ಟ್ರೀಯ ಒಟ್ಟು ದಾಖಲಾತಿಯ ಅನುಪಾತ(ಜಿಇಆರ್) ಶೇ. 24.1. ಇದಕ್ಕೆ ಹೋಲಿಸಿದರೆ ಈ ಅಸಮಾನತೆಯು ಉನ್ನತ ಶಿಕ್ಷಣ ಪಡೆಯುವಲ್ಲಿ ಮುಸ್ಲಿಮರು ಎದುರಿಸುತ್ತಿರುವ ಗಮನಾರ್ಹ ಸವಾಲಗಳನ್ನು ಒತ್ತಿ ಹೇಳುತ್ತದೆ ಎಂದು ‘‘ಆಲ್ ಇಂಡಿಯಾ ಸರ್ವೇ ಆನ್ ಹೈಯರ್ ಎಜುಕೇಶನ್ (ಎಐಎಸ್ಎಚ್ಇ)’’ ಹೇಳಿದೆ.
ಮುಸ್ಲಿಮರ ಪ್ರಾತಿನಿಧ್ಯದಲ್ಲಿ ಪ್ರಾದೇಶಿಕ ವ್ಯತ್ಯಾಸದ ಕುರಿತು ವರದಿ ಗಮನ ಸೆಳೆದಿದೆ. ಮುಸ್ಲಿಮರು ಬಹುಸಂಖ್ಯಾತರಿರುವ ಜಮ್ಮು ಹಾಗೂ ಕಾಶ್ಮೀರದಲ್ಲಿ ಒಟ್ಟು ದಾಖಲಾತಿ ಸರಾಸರಿ ಶೇ. 24.8. ಆದರೆ, ಇಲ್ಲಿ ಮುಸ್ಲಿಮರ ಒಟ್ಟು ಪ್ರಾತಿನಿಧ್ಯ ಶೇ. 34.5. ಇದಕ್ಕೆ ವ್ಯತಿರಿಕ್ತವಾಗಿ ಅರುಣಾಚಲಪ್ರದೇಶದಂತಹ ರಾಜ್ಯದಲ್ಲಿ ಅತಿ ಕಡಿಮೆ ಮುಸ್ಲಿಮರ ಪ್ರಾತಿನಿಧ್ಯ ದಾಖಲಾಗಿದೆ. ಈ ರಾಜ್ಯದಲ್ಲಿ ಒಟ್ಟು ದಾಖಲಾತಿಯ ಅನುಪಾತ ಶೇ. 36.5 ಇದ್ದ ಹೊರತಾಗಿಯೂ ಮುಸ್ಲಿಮರ ಪ್ರಾತಿನಿಧ್ಯ ಶೇ. 0.16 ದಾಖಲಾಗಿದೆ.
ಕೇರಳದಲ್ಲಿ ಒಟ್ಟು ದಾಖಲಾತಿ ಸರಾಸರಿ ಶೇ. 41.3 ಇದ್ದರೆ, ಮುಸ್ಲಿಮ್ ವಿದ್ಯಾರ್ಥಿಗಳ ಪ್ರಾತಿನಿಧ್ಯ ಶೇ. 14.36 ಇದೆ. ಇದು ತುಲನಾತ್ಮಕವಾಗಿ ಹೆಚ್ಚು ಪ್ರಾತಿನಿಧ್ಯವನ್ನು ತೋರಿಸುತ್ತದೆ. ಆದರೆ, ಹರ್ಯಾಣ, ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ಮುಸ್ಲಿಮರಿಗೆ ಕನಿಷ್ಠ ಪ್ರಾತಿನಿಧ್ಯ ಅನುಕ್ರಮವಾಗಿ ಶೇ. 0.99 ಹಾಗೂ ಶೇ. 0.41 ಕಂಡು ಬಂದಿದೆ. ಉತ್ತರ ಪ್ರದೇಶವು ರಾಷ್ಟ್ರೀಯ ಒಟ್ಟು ದಾಖಲಾತಿ ಸರಾಸರಿಗೆ ನಿಕಟವಾಗಿದೆ. ಇಲ್ಲಿ ವಿದ್ಯಾರ್ಥಿಗಳಲ್ಲಿ ಶೇ. 4.68 ಮುಸ್ಲಿಮರು ಒಳಗೊಂಡಿದ್ದರೆ. ಪಶ್ಚಿಮಬಂಗಾಳದಲ್ಲಿ ಮುಸ್ಲಿಮರ ಅತ್ಯಧಿಕ ಪ್ರಾತಿನಿಧ್ಯ ಶೇ. 12.33 ವರದಿಯಾಗಿದೆ.
ಮುಸ್ಲಿಂ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಪ್ರವೇಶಕ್ಕೆ ಅಡ್ಡಿಯಾಗುವ ವ್ಯವಸ್ಥಿತ ಅಡೆತಡೆಗಳನ್ನು ಪರಿಹರಿಸಲು ಅಂತರ್ಗತ ಶಿಕ್ಷಣ ನೀತಿಗಳನ್ನು ವರದಿ ಒತ್ತಿ ಹೇಳುತ್ತದೆ. ಪ್ರವೇಶವನ್ನು ಹೆಚ್ಚಿಸಲು ಹಾಗೂ ಭಾರತದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಸಮತೋಲನದ ಪ್ರಾತಿನಿಧ್ಯವನ್ನು ಖಾತರಿಪಡಿಸಲು ಉದ್ದೇಶಿತ ಪ್ರಯತ್ನಕ್ಕೆ ವರದಿಯು ಕರೆ ನೀಡಿದೆ.