ಗುಜರಾತ್: ಸಿಎಂ ಯೋಜನೆಯಡಿ ಮುಸ್ಲಿಮ್ ಮಹಿಳೆಗೆ ಫ್ಲ್ಯಾಟ್ ಮಂಜೂರು ವಿರೋಧಿಸಿ ನಿವಾಸಿಗಳ ಪ್ರತಿಭಟನೆ
PC ; indianexpress.com
ವಡೋದರಾ: ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಸಚಿವಾಲಯದಡಿ ಉದ್ಯೋಗಿಯಾಗಿರುವ 44 ವರ್ಷದ ಮಹಿಳೆಗೆ 2017ರಲ್ಲಿ ಮುಖ್ಯಮಂತ್ರಿ ಆವಾಸ್ ಯೋಜನೆಯಡಿ ಹರ್ನಿಯ ವಡೋದರಾ ಮಹಾನಗರ ಪಾಲಿಕೆ (ವಿಎಂಸಿ)ಯ ಕಡಿಮೆ ಆದಾಯ ಗುಂಪಿನ ವಸತಿ ಸಂಕೀರ್ಣದಲ್ಲಿ ಫ್ಲ್ಯಾಟ್ ಮಂಜೂರಾದಾಗ ಆಗಿನ್ನೂ ಅಪ್ರಾಪ್ತ ವಯಸ್ಕನಾಗಿದ್ದ ತನ್ನ ಪುತ್ರನೊಂದಿಗೆ ಈ ಬಡಾವಣೆಯಲ್ಲಿ ನೆಲೆಯೂರುವ ಬಗ್ಗೆ ಅವರು ಸಂಭ್ರಮಿಸಿದ್ದರು. ಆದರೆ ಅವರು ತನಗೆ ಮಂಜೂರಾದ ಫ್ಲ್ಯಾಟ್ನ್ನು ಪ್ರವೇಶಿಸುವ ಮೊದಲೇ 462 ಫ್ಲ್ಯಾಟ್ಗಳಿರುವ ಸಂಕೀರ್ಣದ 33 ನಿವಾಸಿಗಳು ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ದೂರಿನಲ್ಲಿ ‘ಮುಸ್ಲಿಮ್’ ವ್ಯಕ್ತಿ ತಮ್ಮ ಸಂಕೀರ್ಣಕ್ಕೆ ಬರುವುದನ್ನು ಆಕ್ಷೇಪಿಸಿದ್ದ ಅವರು, ಮಹಿಳೆಯ ಉಪಸ್ಥಿತಿಯಿಂದಾಗಿ ಸಂಭಾವ್ಯ ‘ಬೆದರಿಕೆ ಮತ್ತು ಕಿರುಕುಳ’ವನ್ನು ಉಲ್ಲೇಖಿಸಿದ್ದರು ಎಂದು indianexpress.com ವರದಿ ಮಾಡಿದೆ.
ಮಹಿಳೆ ಸಂಕೀರ್ಣದಲ್ಲಿ ಫ್ಲ್ಯಾಟ್ ಮಂಜೂರಾದ ಏಕೈಕ ಮುಸ್ಲಿಮ್ ಆಗಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.
ಮುಸ್ಲಿಮ್ ಮಹಿಳೆಗೆ ಫ್ಲ್ಯಾಟ್ ಮಂಜೂರು ಮಾಡಿರುವುದನ್ನು ರದ್ದುಗೊಳಿಸುವಂತೆ ಕೋರಿ 2020ರಲ್ಲಿ ನಿವಾಸಿಗಳು ಮುಖ್ಯಮಂತ್ರಿ ಕಚೇರಿಗೆ ಬರೆದಾಗ ಪ್ರತಿಭಟನೆಗಳು ಮೊದಲು ಆರಂಭಗೊಂಡಿದ್ದವು. ಆದಾಗ್ಯೂ ಹರ್ನಿ ಪೋಲಿಸ್ ಠಾಣೆಯ ಅಧಿಕಾರಿಗಳು ಸಂಬಂಧಿಸಿದ ಎಲ್ಲರ ಹೇಳಿಕೆಗಳನ್ನು ಪಡೆದುಕೊಂಡು ದೂರನ್ನು ಮುಕ್ತಾಯಗೊಳಿಸಿದ್ದರು. ಇದೇ ವಿಷಯದಲ್ಲಿ ಇತ್ತೀಚಿಗೆ ಜೂ.10ರಂದು ಮತ್ತೆ ಪ್ರತಿಭಟನೆ ನಡೆದಿತ್ತು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಹಿಳೆ, ‘ನಾನು ವಡೋದರಾದಲ್ಲಿ ಮಿಶ್ರ ನೆರೆಹೊರೆಯಲ್ಲಿ ಬೆಳೆದಿದ್ದೇನೆ ಮತ್ತು ನನ್ನ ಕುಟುಂಬವು ಎಂದಿಗೂ ಘೆಟ್ಟೋಗಳ ಪರಿಕಲ್ಪನೆಯಲ್ಲಿ ನಂಬಿಕೆ ಹೊಂದಿರಲಿಲ್ಲ. ಎಲ್ಲರನ್ನೂ ಒಳಗೊಂಡ ಬಡಾವಣೆಯಲ್ಲಿ ನನ್ನ ಮಗ ಬೆಳೆಯಬೇಕೆಂದು ನಾನು ಯಾವಾಗಲೂ ಬಯಸಿದ್ದೆ. ಆದರೆ ನನ್ನ ಕನಸುಗಳು ಭಗ್ನಗೊಂಡಿವೆ,ಈಗಾಗಲೇ ಸುಮಾರು ಆರು ವರ್ಷಗಳಾಗಿವೆ,ನಾನು ಎದುರಿಸುತ್ತಿರುವ ವಿರೋಧ ತಣ್ಣಗಾಗಿಲ್ಲ. ನನ್ನ ಮಗ ಈಗ 12ನೇ ತರಗತಿಯಲ್ಲಿ ಓದುತ್ತಿದ್ದಾನೆ, ಏನು ನಡೆಯುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧನಾಗಿದ್ದಾನೆ. ತಾರತಮ್ಯವು ಆತನ ಮೇಲೆ ಮಾನಸಿಕವಾಗಿ ಪರಿಣಾಮ ಬೀರುತ್ತದೆ’ ಎಂದು ಅಳಲು ತೋಡಿಕೊಂಡರು.
ಜಿಲ್ಲಾಧಿಕಾರಿ, ಮೇಯರ್, ವಿಎಂಸಿ ಆಯುಕ್ತ ಮತ್ತು ವಡೋದರಾ ಪೋಲಿಸ್ ಆಯುಕ್ತರಿಗೆ ದೂರು ಸಲ್ಲಿಸಿರುವ 33 ನಿವಾಸಿಗಳು, ಮುಸ್ಲಿಮ್ ಮಹಿಳೆಗೆ ಫ್ಲ್ಯಾಟ್ ಮಂಜೂರು ಮಾಡಿರುವುದನ್ನು ರದ್ದುಗೊಳಿಸಬೇಕು ಮತ್ತು ಅವರನ್ನು ಬೇರೆ ವಸತಿ ಯೋಜನೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ. ತಮ್ಮ ದೂರನ್ನು ಅವರು ‘ಸಾರ್ವಜನಿಕ ಹಿತಾಸಕ್ತಿಯ ಅಹವಾಲು ’ ಎಂದು ಹೇಳಿಕೊಂಡಿದ್ದಾರೆ.
‘ವಿಎಂಸಿಯು 2019 ಮಾರ್ಚ್ನಲ್ಲಿ ಓರ್ವ ಅಲ್ಪಸಂಖ್ಯಾತ ಫಲಾನುಭವಿಗೆ ಮನೆ ನಂ. ಕೆ204ನ್ನು ಮಂಜೂರು ಮಾಡಿದೆ. ಹರ್ನಿ ಹಿಂದು ಪ್ರಾಬಲ್ಯದ ಶಾಂತಿಯುತ ಪ್ರದೇಶವಾಗಿದೆ ಮತ್ತು ಸುಮಾರು ನಾಲ್ಕು ಕಿ.ಮೀ.ಗಳ ಪರಿಧಿಯಲ್ಲಿ ಮುಸ್ಲಿಮರ ಮನೆಗಳಿಲ್ಲ. ಇದು 461 ಕುಟುಂಬಗಳ ಶಾಂತಿಯುತ ಬದುಕಿಗೆ ಬೆಂಕಿ ಹಚ್ಚಿದಂತಿದೆ ’ ಎಂದು ಮೋಟನಾಥ ರೆಸಿಡೆನ್ಸಿ ಕೋಆಪರೇಟಿವ್ ಹೌಸಿಂಗ್ ಸರ್ವಿಸಸ್ ಸೊಸೈಟಿ ಲಿ. ಸಲ್ಲಿಸಿರುವ ಅಹವಾಲಿನಲ್ಲಿ ಹೇಳಲಾಗಿದೆ.
ಮಹಿಳೆ ಪ್ರಸ್ತುತ ತನ್ನ ಪೋಷಕರು ಮತ್ತು ಮಗನೊಂದಿಗೆ ವಡೋದರಾದ ಬೇರೊಂದು ಪ್ರದೇಶದಲ್ಲಿ ವಾಸವಾಗಿದ್ದಾರೆ. ‘ವಿರೋಧವಿದೆ ಎಂಬ ಮಾತ್ರಕ್ಕೆ ನಾನು ಕಷ್ಟಪಟ್ಟು ಗಳಿಸಿರುವ ಆಸ್ತಿಯನ್ನು ಮಾರಾಟ ಮಾಡಲು ಬಯಸುವುದಿಲ್ಲ, ನಾನು ಕಾಯುತ್ತೇನೆ. ಕಾಲನಿಯ ವ್ಯವಸ್ಥಾಪಕ ಸಮಿತಿಯವರು ಇತ್ತೀಚಿಗೆ ನನಗೆ ಕರೆ ಮಾಡಿ ನಿರ್ವಹಣಾ ಶುಲ್ಕದ ಬಾಕಿಯನ್ನು ತುಂಬುವಂತೆ ತಿಳಿಸಿದ್ದರು. ಓರ್ವ ನಿವಾಸಿಯಾಗಿ ಶೇರು ಸರ್ಟಿಫಿಕೇಟ್ನ್ನು ಅವರು ನನಗೆ ಈವರೆಗೆ ನೀಡಿಲ್ಲ, ಅದನ್ನು ನೀಡಿದರೆ ಹಣವನ್ನು ಕಟ್ಟುವುದಾಗಿ ಅವರಿಗೆ ತಿಳಿಸಿದ್ದೇನೆ. ವಿಎಂಸಿ ಈಗಾಗಲೇ ಎಲ್ಲ ನಿವಾಸಿಗಳಿಂದ ಒಂದು ಬಾರಿಯ ನಿರ್ವಹಣಾ ಶುಲ್ಕವಾಗಿ 50,000 ರೂ.ಸಂಗ್ರಹಿಸಿದ್ದು, ನಾನೂ ಪಾವತಿಸಿದ್ದೇನೆ. ಸರಕಾರವು ಕಾಲನಿಯಲ್ಲಿ ವಾಸಿಸುವ ನನ್ನ ಹಕ್ಕನ್ನು ನಿರಾಕರಿಸಿಲ್ಲ, ಹೀಗಾಗಿ ನಾನು ಕಾನೂನು ಕ್ರಮ ತೆಗೆದುಕೊಳ್ಳಬಹುದೇ ಎನ್ನುವುದು ಸದ್ಯಕ್ಕೆ ನನಗೆ ಖಚಿತವಿಲ್ಲ ’ ಎಂದು ಅವರು ಹೇಳಿದರು.