ಉತ್ತರ ಪ್ರದೇಶ | ಹೋಳಿ ಸಂಭ್ರಮಾಚರಣೆಯಲ್ಲಿ ಮುಸ್ಲಿಮರ ಪಾಲ್ಗೊಳ್ಳುವಿಕೆಯನ್ನು ನಿಷೇಧಿಸಬೇಕು: ಹಿಂದೂ ಸಂಘಟನೆ ಆಗ್ರಹ
ಮುಸ್ಲಿಮರು ಪ್ರತ್ಯೇಕತಾವಾದಿಗಳು ಮತ್ತು ಜಿಹಾದಿಗಳು ಎಂದು ದೂಷಿಸಿದ ಧರ್ಮ ರಕ್ಷಾ ಸಂಘದ ಪದಾಧಿಕಾರಿ

ಸಾಂದರ್ಭಿಕ ಚಿತ್ರ | PC : PTI
ಮಥುರಾ: ಹೋಳಿ ಸಂಭ್ರಮಾಚರಣೆಯಲ್ಲಿ ಮುಸ್ಲಿಮರ ಪಾಲ್ಗೊಳ್ಳುವಿಕೆಯನ್ನು ನಿಷೇಧಿಸಬೇಕು ಎಂದು ವೃಂದಾವನ ಮೂಲದ ಹಿಂದೂ ಸಂಘಟನೆ ಧರ್ಮ ರಕ್ಷಾ ಸಂಘವು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಆಗ್ರಹಿಸಿದೆ.
ಇತ್ತೀಚೆಗೆ ಬರೇಲಿಯಲ್ಲಿ ನಡೆದಿರುವ ಘಟನೆಗಳು ಮುಸ್ಲಿಂ ಸಮುದಾಯದಿಂದ ಹಿಂದೂಗಳಿಗೆ ಬೆದರಿಕೆ ಇರುವುದನ್ನು ತೋರಿಸುತ್ತಿದ್ದು, ಅವರು ಹೋಳಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ವಿಧಿಸಬೇಕು ಎಂದು ಧರ್ಮ ರಕ್ಷಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಸೌರಭ್ ಗೌರ್ ಆಗ್ರಹಿಸಿದ್ದಾರೆ.
“ಪ್ರಮುಖ ಯಾತ್ರಾ ಸ್ಥಳಗಳಾದ ಮಥುರಾ, ವೃಂದಾವನ, ನಂದಗಾಂವ್, ಬರ್ಸಾನ, ಗೋಕುಲ್ ಹಾಗೂ ದೌಜಿಯಲ್ಲಿ ನಡೆಯಲಿರುವ ಹೋಳಿ ಸಂಭ್ರಮಾಚರಣೆಯಲ್ಲಿ ಮುಸ್ಲಿಮರು ಭಾಗವಹಿಸುವುದನ್ನು ನಿರ್ಬಂಧಿಸಲು ನಾವು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಸನಾತನ ಸಮುದಾಯದ ಪಾಲಿಗೆ ಹೋಳಿಯು ಪ್ರೀತಿ ಹಾಗೂ ಸೌಹಾರ್ದತೆಯ ಹಬ್ಬವಾಗಿದ್ದು, ಈ ಹಬ್ಬದಲ್ಲಿ ಮುಸ್ಲಿಮರು ಭಾಗವಹಿಸುವುದು ಹಾಗೂ ಬಣ್ಣಗಳ ಮಾರಾಟ ಮಾಡುವುದನ್ನು ನಾವು ವಿರೋಧಿಸುತ್ತೇವೆ ಎಂದು ಸಂಘಟನೆ ಘೋಷಿಸಿದೆ.
ಸಂಘಟನೆಯ ಆಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿರುವ ಧರ್ಮ ರಕ್ಷಾ ಸಂಘದ ರಾಷ್ಟ್ರೀಯ ಸಮನ್ವಯಕಾರ ಆಚಾರ್ಯ ಬದ್ರೀಶ್, ಮುಸ್ಲಿಮರು ಪ್ರತ್ಯೇಕತಾವಾದಿಗಳು ಹಾಗೂ ಜಿಹಾದಿಗಳು ಎಂದು ದೂಷಿಸಿದ್ದಾರೆ. ಗುಜರಾತ್, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ನಡೆದಿದ್ದ ಗಾರ್ಬಾ ಸಂಭ್ರಮಾಚರಣೆಯ ವೇಳೆ ಮುಸ್ಲಿಮರ ಪಾಲ್ಗೊಳ್ಳುವಿಕೆಯ ಮೇಲೆ ನಿಷೇಧ ಹೇರಿದ್ದಂತೆ ಹೋಳಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳದಂತೆಯೂ ಅವರ ಮೇಲೆ ನಿಷೇಧ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ನಡುವೆ, ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವ್ಯಾಜ್ಯದ ಅರ್ಜಿದಾರರಾದ ದಿನೇಶ್ ಶರ್ಮ, ಬ್ರಜ್ ನಲ್ಲಿ ನಡೆಯಲಿರುವ ಹೋಳಿ ಸಂಭ್ರಮಾಚರಣೆಯಲ್ಲಿ ಮುಸ್ಲಿಮರು ಪಾಲ್ಗೊಳ್ಳದಂತೆ ನಿಷೇಧ ಹೇರಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ರಕ್ತದಲ್ಲಿ ಪತ್ರ ಬರೆದು ಒತ್ತಾಯಿಸಿದ್ದಾರೆ.
ಮುಸ್ಲಿಮರು ಸಂಭ್ರಮಾಚರಣೆಯ ವೇಳೆ ಸಿಹಿ ತಿನಿಸುಗಳ ಮೇಲೆ ಉಗುಳುವ ಸಾಧ್ಯತೆ ಇದೆ ಎಂದೂ ಅವರು ಆರೋಪಿಸಿದ್ದಾರೆ. ಆದರೆ, ಈ ಆರೋಪಗಳನ್ನು ವಿಭಜನಕಾರಿ ಎಂದು ಶಾಹಿ ಈದ್ಗಾ ಇಂತಝಾಮಿಯಾ ಸಮಿತಿಯ ಕಾರ್ಯದರ್ಶಿ ತನ್ವೀರ್ ಅಹ್ಮದ್ ತಳ್ಳಿ ಹಾಕಿದ್ದಾರೆ.
ಧರ್ಮ ರಕ್ಷಾ ಸಂಘದ ಹೇಳಿಕೆಯು ಅದರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಅವರ ಬೇಡಿಕೆಗಳಿಗೆ ಸ್ಪಂದಿಸುವುದು ಸರಕಾರಕ್ಕೆ ಬಿಟ್ಟಿದ್ದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.